ಕೋಟಿಗೊಬ್ಬ 3 ಇಂದು ಬಿಡುಗಡೆ ಆಗದೇ ಇರುವುದಕ್ಕೆ ಕಿಚ್ಚ ಸಿದೀಪ್ ಅಭಿಮಾನಿಗಳಿಗೆ ಭಾರಿ ನಿರಾಸೆ ಉಂಟಾಗಿದ್ದು ನಿರ್ಮಾಪಕ ಮತ್ತು ಚಿತ್ರ ವಿತರಕರ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು, ಕಾರಣಾಂತರದಿಂದಾಗಿ ‘ಕೋಟಿಗೊಬ್ಬ 3’ ಚಿತ್ರ ರಿಲೀಸ್ ಆಗದೇ ಇರುವುದಕ್ಕೆ ನಟ ಕಿಚ್ಚ ಸುದೀಪ್ ಕ್ಷಮೆ ಯಾಚಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ ಆಗಿರುವ ಸಮಸ್ಯೆಗೆ ಕ್ಷಮಿಸಿ ಎಂದು ಮನವಿ ಮಾಡಿದ್ದಾರೆ.
‘ಚಿತ್ರಮಂದಿರಗಳ ಬಳಿ ಕಾಯುತ್ತಿರುವ ಎಲ್ಲ ಸ್ನೇಹಿತರಿಗೆ ಈ ಬಗ್ಗೆ ತಿಳಿಸುವ ಜವಾಬ್ದಾರಿ ನನ್ನದು. ಕಾರಣಾಂತರಗಳಿಂದಾಗಿ ಸಿನಿಮಾ ಪ್ರದರ್ಶನದಲ್ಲಿ ವ್ಯತ್ಯಯವಾಗಿದೆ. ಇದಕ್ಕೂ ಚಿತ್ರಮಂದಿರದವರಿಗೂ ಯಾವುದೇ ಸಂಬಂಧವಿಲ್ಲ. ಅವರ ಬಳಿ ಕೆಟ್ಟದಾಗಿ ಅಥವಾ ಸಿಟ್ಟಿನಿಂದ ನಡೆದುಕೊಳ್ಳಬೇಡಿ’ ಎಂದು ಸುದೀಪ್ ಮನವಿ ಮಾಡಿದ್ದಾರೆ.
‘ನನಗೂ ಸಿನಿಮಾವನ್ನು ರಿಲೀಸ್ ಮಾಡಲು ಕಾತರನಾಗಿದ್ದೇನೆ. ಇಷ್ಟು ದೊಡ್ಡ ಗ್ಯಾಪ್ ನಂತರ ಚಿತ್ರವನ್ನು ತೆರೆಗೆ ತರುವ ಸಂಭ್ರಮದಲ್ಲಿದ್ದೇವೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಕೊಂಚ ತಾಳ್ಮೆ ಇರಲಿ. ದಯವಿಟ್ಟು ಚಿತ್ರಮಂದಿರ ಹಾಗೂ ಬಂದಿರುವ ಪ್ರೇಕ್ಷಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ. ಸಿನಿಮಾ ರಿಲೀಸ್ ಹಾಗೂ ಪ್ರದರ್ಶನದ ಸಮಯ ಕುರಿತಂತೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.