ಸ್ಯಾಂಡಲ್ ವುಡ್ ನಲ್ಲಿ ಸದ್ಯ ಬಹು ಬೇಡಿಕೆಯ ಸಂಭಾಷಣೆಕಾರ ಮತ್ತು ತನ್ನದೆ ವಿಭಿನ್ನ ಶೈಲಿಯ ಪಂಚಿಂಗ್ ಡೈಲಾಗ್ ಮೂಲಕ ಇಡೀ ಸಿನಿಮಾಕೆ ಟ್ರೆಂಡ್ ಕ್ರಿಯೇಟ್ ಮಾಡಬಲ್ಲ ನಿಪುಣ ಡೈಲಾಗ್ ರೈಟರ್ ಎಂದರೆ ಅವರೆ ನಮ್ಮ ಮಾಸ್ತಿ, ಕನ್ನಡ ಚಿತ್ರ ರಂಗದ ಆಸ್ತಿ.
ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ ಟಗರು ಸಿನಿಮಾ ಆ ಮಟ್ಟದ ಹಿಟ್ ಗೆ ಕಾರಣ ಆ ಚಿತ್ರದ ಸಂಭಾಷಣೆ ಎಂದರೆ ತಪ್ಪಾಗೋದಿಲ್ಲಾ. ಮತ್ತೀಗ ಸ್ಯಾಂಡಲ್ ವುಡ್ನಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಮಾಡಿ ಅಕ್ಟೋಬರ್ 14 ಕ್ಕೆ ಅಂದ್ರೆ ನಾಳೆ ಬಿಡುಗಡೆ ಆಗುತ್ತಿರುವ ಸಲಗ ಚಿತ್ರಕ್ಕೂ ಮಾಸ್ತಿ ಅವರದೇ ಸಂಭಾಷಣೆ. ತಮ್ಮ ಮೊನಚು ಸಂಭಾಷಣೆಯ ಮೂಲಕ ಸಿನಿ ಪ್ರೀಯರಿಗೆ ಒಂದೊಳ್ಳೆ ಎಂಟರ್ ಟೈನ್ಮೆಂಟ್ ನೀಡಬಲ್ಲ ಮಾಸ್ತಿಯವರು ಕನ್ನಡ ಪಿಚ್ಚರ್ ಜೊತೆ ಮಾತನಾಡಿದ್ದಾರೆ.
‘ಟಗರು, ಕಡ್ಡಿಪುಡಿ, ಕಾಲೇಜ್‌ಕುಮಾರ್, ಅಯೋಗ್ಯ, ಕಟ್ಟುಕಥೆ, ಖಾಕಿ, ಜಂಟಲ್‌ಮ್ಯಾನ್, ಹೊಂದಿಸಿ ಬರೆಯಿರಿ, ಈಗ ಸಲಗ’ ಸಿನಿಮಾಗೆ ಸಂಭಾಷಣೆ ಬರೆದಿದ್ದೀರಿ ಇದು ಹೇಗೆ ಸಾಧ್ಯ ಆಯ್ತು ಒಂದ್ ಕಡೆ ರೌಡಿಸಂ ಚಿತ್ರಕ್ಕೂ ಬರಿತೀರಿ, ಇನ್ನೊಂದ್ ಕಡೆ ಪ್ರೇಮ ಕಥೆಗಳಿಗೂ ಸಂಭಾಷಣೆ ಬರಿತೀರಿ. ಕಾಮಿಡಿ ಚಿತ್ರಗಳಿಗೂ ಬರಿತೀರ ಹೇಗೆ ಬ್ಯಾಲನ್ಸ್ ಮಾಡ್ತೀರ ಸರ್ ಇದ್ನೆಲ್ಲಾ?
ನಿರ್ದೇಶಕರೊಂದಿಗಿನ ಸಾಂಗತ್ಯ ತುಂಬಾ ಮುಖ್ಯ ಆಗತ್ತೆ ನಾನು ಮೊದಲು ಅವರ ಜೊತೆ ಬೆರಿತೀನಿ, ಅಯೋಗ್ಯ ಚಿತ್ರ ಮಾಡುವಾಗಲು ಮಹೇಶ್ ಮತ್ತು ನಾನು ಹಲವಾರು ವಿಷಯಗಳನ್ನು ಮಾತಾಡ್ತಿದ್ವಿ, ಆಗ ಅವರ ವೇವ್ ಲೆಂಥ್ ಗೊತ್ತಾಗ್ಬಿಡತ್ತೆ, ಕಡ್ಡಿಪುಡಿ ಮಾಡ್ವಾಗ ಸೂರಿ ಸರ್ ಜೊತೆ ಕೇಳಂಗೆ ಇಲ್ಲ ಅವರು ನನ್ನ ಗುರು, ನಾನು ಎಲ್ಲಾ ನಿರ್ದೇಶಕರಿಂದ ಕಲ್ತಿದ್ದೀನಿ ನಾನೊಬ್ಬ ವಿದ್ಯಾರ್ಥಿ ಕೂತು ಬರ್ದಿದ್ದೀನಿ, ನನ್ನ ಪ್ರಕಾರ ನಿರ್ದೇಶಕರು ಅಂದ್ರೆ ಟೀಚರ್ ಇದ್ದಂತೆ ಎನ್ನುತ್ತಾರೆ ಮಾಸ್ತಿ.
ನೀವು ಇಂಡಸ್ಟ್ರಿಗೆ ಬಂದು 15 ವರ್ಷ ಆಗಿದೆ ಹೇಗಿದೆ ಸರ್ ನಿಮ್ಮ ಮತ್ತು ವಿಜಯ್ ಅವರ ಸ್ನೇಹ ಒಡನಾಟ?
ವಿಜಯ್ ನನಗೆ ತುಂಬಾ ಒಳ್ಳೆಯ ಗೆಳೆಯ ಹುಂಬ, ಪರಸ್ಪರ ಕಲ್ತಿದ್ದೀವಿ, ಚರ್ಚೆ ಮಾಡ್ಕೊತೀವಿ, ಮುನಿಸಿರತ್ತೆ, ಈ ಚಿತ್ರ ಪ್ಲಾನ್ ಮಾಡ್ದಾಗ ಯಾವ್ದೇ ಗುರಿ ಇರ್ಲಿಲ್ಲಾ ಆದ್ರೆ ನಂತರ ಇಡೀ ತಂಡ ಮತ್ತು ವಿಜಯ್ ಅವರ ಶ್ರಮ ಎರಡೂ ಇಲ್ಲಿ ವರ್ಕೌಟ್ ಆಯ್ತು. ಕಥೆ ಮತ್ತು ಚಿತ್ರಕಥೆ ರೆಡಿ ಮಾಡಿಕೊಂಡಿದ್ದರು. ಇದನ್ನು ಬೇರೊಬ್ಬರು ನಿರ್ದೇಶನ ಮಾಡುವುದಕ್ಕಿಂತ ವಿಜಿ ಅವರೇ ಮಾಡಬೇಕು ಎಂದು ನಿರ್ಧಾರವಾಯಿತು. ‘ನಾನು ದೃಶ್ಯಗಳನ್ನು ಹೇಳುತ್ತಾ ಹೋಗುತ್ತೇನೆ, ನೀನು ಬರೆಯುತ್ತಾ ಹೋಗು’ ಎಂದು ಅವರು ಹೇಳಿದರು. ಹಾಗೇ ಸಂಭಾಷಣೆ ಕೆಲಸ ಆರಂಭವಾಯಿತು’ ಇದಕ್ಕೆ ಒಬ್ಬೊಬ್ಬರು ಸೇರ್ತಾ ಬಂದ್ರು, ಚರಣ್ ರಾಜ್ ಮ್ಯೂಸಿಕ್, ದೀಪು ಎಸ್ ಕುಮಾರ್ ಎಡಿಟಿಂಗ್, ಚಿತ್ರಕ್ಕೆ ಬೇಕಾದ ಕಲಾವಿದ್ರು, ಶಿವಸೇನಾ ಡಿಓಪಿ, ಅಭಿ ಕೂಡ ಬಂದ್ರು ಆಗ ವಿಜಿ ಅವರಿಗೆ ಇನ್ನಷ್ಟು ಶಕ್ತಿ ಬಂತು ವಿಜಯ್ ತೊಡೆ ತಟ್ಟಿ ನಿಂತ್ರು.
ರೌಡಿಸಂ ಸಿನಿಮಾ ಮಾಡುವಾಗ ನೀವು ರೌಡಿಗಳು ಇರುವ ಪ್ರದೇಶಕ್ಕೆ ಭೇಟಿ ನೀಡಿದ್ರಾ ಹೇಗಿತ್ತು ಸರ್ ಸಂಭಾಷಣೆ ಬರೆಯುವ ಅನುಭವ?
ಮಾಸ್ ಅಪೀಲ್ ಸಿನಿಮಾಗಳಿಗೆ ಒಂದು ಕ್ಯಾಟಗರಿ ಇದ್ದೇ ಇರತ್ತೆ ಅವರು ಇಂತಹ ಸಿನಿಮಾಗಳನ್ನ ಗೆಲ್ಲಿಸ್ತಾರೆ ರೌಡಿಸಂನ ಕೆಲವು ವಿಷಯಗಳು ದುನಿಯಾ ವಿಜಯ್ ಅವರಿಗೆ ಬಹಳ ಚೆನ್ನಾಗಿ ಗೊತ್ತಿತ್ತು. ನಮ್ಮ ಮನೆಯ ಬಳಿ ಒಂದು ಏರಿಯಾ ಇದೆ. ಅಲ್ಲಿನ ಕೆಲವರಿಗೆ ರೌಡಿಸಂ ಎನ್ನುವುದು ಬಹಳ ಸುಲಭ. ಅಂಥವರ ಜತೆಗೆ ನಾನು ಬಹಳಷ್ಟು ದಿನಗಳ ಕಾಲ ಚರ್ಚೆ ಮಾಡಿದ್ದೇನೆ. ಇದರ ಜತೆಗೆ ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ನನ್ನ ಸ್ನೇಹಿತರಿದ್ದಾರೆ. ಅವರ ಜತೆಯೂ ನಾನು ಮಾತನಾಡುತ್ತಿರುತ್ತೇನೆ. ಇವೆಲ್ಲವೂ ಸಂಭಾಷಣೆ ಬರೆಯಲು ನನಗೆ ಸಹಾಯ ಮಾಡಿತು’ ಎಂದು ಮಾಸ್ತಿ ವಿವರಿಸಿದ್ದಾರೆ. ‘ಸಲಗ ಸಿನಿಮಾಗಾಗಿ ಒಂದು ಕಡೆ ರೌಡಿಗಳು, ಮತ್ತೊಂದು ಕಡೆ ಪೊಲೀಸರನ್ನು ಹೊಂದಿಸಿ ಸಂಭಾಷಣೆ ಬರೆಯಲಾಗಿದೆ. ನಿರ್ದೇಶಕ ದುನಿಯಾ ವಿಜಯ್ ಈ ಸಿನಿಮಾದಲ್ಲಿ ಖಂಡಿತಾ ಇಷ್ಟವಾಗುತ್ತಾರೆ’ ಎಂದು ಮಾಸ್ತಿ ಹೇಳಿದ್ದಾರೆ.
ಈ ಸಿನಿಮಾದ ಪೋಸ್ಟರ್‌ಗಳನ್ನು ನೋಡಿದರೆ ಇದು ಗ್ರೇ ಶೇಡ್ ಇರುವ ಸಿನಿಮಾ ಎನಿಸುತ್ತದೆ. ಸಿನಿಮಾ ಮಂದಿರದೊಳಗೆ ಬಂದರೆ ಇದೊಂದು ಭಾವನಾತ್ಮಕ ಸಿನಿಮಾ ಎನಿಸುತ್ತದೆ. ಸಲಗ ನಮ್ಮ ಮದ್ಯೆ ನಡೆದಿರುವ, ನಾವು ನೋಡಿರುವಂತಹ ಘಟನೆಗಳ ಗುಚ್ಛ, ನಟ ವಿಜಿ ಅವರ ಅನುಭವವೇ ಇಲ್ಲಿಕಥೆಯಾಗಿದೆ. ಈ ಚಿತ್ರದಲ್ಲಿರೌದ್ರವಿದೆ, ಹಾಸ್ಯ, ಭಾವುಕತೆ ಎಲ್ಲವೂ ಇದೆ. ಹಾಗಾಗಿ ಸಂಭಾಷಣೆ ಪ್ಯಾಕ್ ಆಗಿದೆ.ನನ್ನ ಸಂಭಾಷಣೆಗಳು ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತವೆ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ ಮಾಸ್ತಿ.