ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್ ಬಿ. ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದಾರೆ. ಈಗ ಈ ಸಿನಿಮಾಗೆ ರಕ್ಷಿತ್ ಶೆಟ್ಟಿ ಬೆಂಬಲ ನೀಡಿದ್ದಾರೆ. ಅವರು ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ಇದರಿಂದ ಸಿನಿಮಾಗೆ ಮೈಲೇಜ್ ಸಿಗುವ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಕೂಡ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
ಕೊರೊನಾ ಸಮಯದಲ್ಲಿ ಸಾಕಷ್ಟು ಅಡೆತಡೆಗಳ ನಡುವೆ ಸಿನಿಮಾ ಕಂಪ್ಲೀಟ್ ಮಾಡಿರುವ ಚಿತ್ರ ತಂಡ ಸಿನಿ ಪ್ರೇಮಿಗಳು ಈ ಸಿನಿಮಾವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ ಹಾಗೂ ರಕ್ಷಿತ್ ಶೆಟ್ಟಿ ನೀಡಿರುವ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ನಮ್ಮ ಚಿತ್ರ ಗರುಡ ಗಮನ ವೃಷಭ ವಾಹನ ಒಂದು ಹೋರಾಟ. ಜಗತ್ತೇ ಮುಚ್ಚಿ ಕೂತಿರುವಾಗ ನಾವು ನಮ್ಮ ಚಿತ್ರವನ್ನು ಸರಕಾಗಿ ಮಾರದೆ ಕಲೆಯಾಗಿ ನಿಮ್ಮ ಮುಂದೆ ತರುವ ಹುಚ್ಚುತನದಲ್ಲಿ ಕಾದು ಕುಳಿತಿದ್ದೆವು. ಈಗ ಈ ಹುಚ್ಚುತನಕ್ಕೆ ಇನ್ನೊಂದು ಹುಚ್ಚು ತಂಡ ಸೇರಿಕೊಂಡಿದೆ Paramvah Pictures ನಮ್ಮ ಚಿತ್ರವನ್ನು ನಿಮ್ಮ ಮುಂದೆ ಅರ್ಪಿಸುತ್ತಿದೆ ಎನ್ನುವುದು ನಮಗೆ ಅತೀ ಸಂತಸದ ವಿಷಯ. ಗೆಳೆಯ Rakshit Shetty ಯವರ ಹುಚ್ಚಿಗೂ ನಮ್ಮ ಮೊಂಡುತನಕ್ಕೂ ನಿಮ್ಮ ಬೆಂಬಲವನ್ನು ಆಶಿಸುತ್ತಾ ಪರಂವಃ ಅರ್ಪಿಸುವ “ಗರುಡ ಗಮನ ವೃಷಭ ವಾಹನ“
ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆಯ ಮೇಲೆ ಯಾವ ರೀತಿಯ ಕಮಾಲ್ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ. ಸಿನಿರಸಿಕರಲ್ಲಿ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದ್ದು, ಚಿತ್ರ ಬಿಡುಗಡೆಯಾಗುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.
****