ಕಳೆದ ಎರಡು ವರ್ಷದಿಂದ ಕೊರೊನಾದಿಂದ ಮಂಕು ಕವಿದಿದಂತಿದ್ದ ಸ್ಯಾಂಡಲ್ ವುಡ್ಗೆ ಈಗ ಹೊಸ ಚೈತನ್ಯ ಬಂದಿದೆ, ಚಿತ್ರ ಮಂದಿರಗಳ ಸಂಪೂರ್ಣ ಭರ್ತಿಗೆ ಅಕ್ಟೋಬರ್ 1 ರಿಂದ ಅವಕಾಶ ಎಂದು ಸರ್ಕಾರ ಹೇಳಿದ್ದೇ ತಡ ಕರ್ನಾಟಕದ ಬಹುತೇಕ ಚಿತ್ರ ಮಂದಿರಗಳು ಮದು ಮಗಳಂತೆ ಸಿಂಗರಿಸಿಕೊಂಡು ಸಿನಿಮಾ ಮೆರವಣಿಗೆಗೆ ಸಜ್ಜಾಗಿ ನಿಂತಿವೆ.
ಪ್ರತಿಯೊಬ್ಬ ಮನುಷ್ಯನಿಗೂ ಮನರಂಜನೆ ಎಷ್ಟು ಮುಖ್ಯ ಎಂಬುದು ಕಳೆದ ಎರಡು ವರ್ಷದಲ್ಲಿ ಅನುಭವಕ್ಕೆ ಬಂದಿದೆ. ಕೊರೊನಾ ಕಾಟದಿಂದ ಹೊರಗೆ ಬರಲಾಗದೆ ಮನೆಯೊಳಗೆ ಇದ್ದು ಬೇಸತ್ತಿದ್ದ ಜನರಿಗೆ, ವರ್ಕ್ ಫ್ರಮ್ ಹೋಮ್ ನಂತಹ ಕೆಲಸಗಳಿಂದಾಗಿ ಮಾನಸಿಕ ಕಿರಿ ಕಿರಿ ಅನುಭವಿಸಿದ್ದ ಮಂದಿಗೆ ಹೊರಗೆ ಹೋಗಿ ಕಾಲ ಕಳೆಯಬೇಕೆಂಬ ಬಯಕೆಯನ್ನು ನೀಗಿಸಲು ಕನ್ನಡ ಚಿತ್ರ ರಂಗ ತಯಾರಾಗಿದೆ.
ಏಪ್ರಿಲ್ 1ರಂದು ತೆರೆಕಂಡಿದ್ದ ಪವರ್ ಸ್ಟಾರ್ ಪುನೀತ್ ನಟನೆ ಯುವರತ್ನ ಸಿನಿಮಾಗೆ, ಮೂರೇ ದಿನದಲ್ಲಿ ಶಾಕ್ ಕೊಟ್ಟಿತ್ತು ಸರ್ಕಾರ. ಅದಾದ ನಂತರ 5 ತಿಂಗಳ ಬಳಿಕ ಇಂದಿನಿಂದ ಮತ್ತೆ ಬೆಳ್ಳಿಪರದೆಗೆ ಹೊಸ ರಂಗು ಬರಲಿದೆ.ಸಾಕಷ್ಟು ಸಿನೆಮಾಗಳು ಬಿಡುಗಡೆಗೆ ಸಾಲುಗಟ್ಟಿದೆ. ಹೊಸಬರು, ಸ್ಟಾರ್ ಗಳು ಸಿನಿಜಾತ್ರೆ ಮಾಡಲು ಸಿದ್ಧರಾಗಿದ್ದಾರೆ. ಇನ್ನೇನಿದ್ದರು ಪ್ರೇಕ್ಷಕರು ಬಿಡುವು ಮಾಡಿಕೊಂಡು ಸಿನೆಮಾ ನೋಡಿ ಸಂತೋಷ ಪಡುವುದೊಂದೇ ಬಾಕಿ ಇದೆ.
****