ಸ್ವರ ಮಾಂತ್ರಿಕ, ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಮ್ಮಿಂದ ದೂರವಾಗಿ ಒಂದು ವರ್ಷ ಕಳೆದಿದೆ. ಸೆಪ್ಟಂಬರ್ 25 ಎಸ್.ಪಿ.ಬಿ ಅವರು ತೀರಿಕೊಂಡ ದಿನ. ಅಂದು ನಾಡಿನ ಉದ್ದಗಲಕ್ಕೂ ಗಾನ ಗಾರುಡಿಗನ ಪುಣ್ಯ ಸ್ಮರಣೆಯನ್ನು ಸಂಗೀತ ಕಾರ್ಯಕ್ರಮಗಳ ಮೂಲಕ ಮಾಡಲಾಯಿತು. ಎಸ್.ಪಿ.ಬಿ ಅವರ ಸರಳತೆ, ವ್ಯಕ್ತಿತ್ವ, ಮಾನವೀಯತೆ ಗುಣಗಳನ್ನು ವರ್ಣಿಸಲು ಪದಗಳಿಲ್ಲ. ಅವರಲ್ಲಿದ್ದ ಮುಗ್ದತೆಗೆ ಮಾರುಹೋಗದವರಿಲ್ಲ. ಅಂತಹ ಮೇರು ವ್ಯಕ್ತಿತ್ವದ ಎಸ್.ಪಿ.ಬಿ ಸಂಗೀತದ ಲೆಜೆಂಡ್ ಎಂದರೆ ತಪ್ಪಾಗಲಾರದು. ಎಸ್‌ಪಿಬಿ ಸಂಗೀತ ಕ್ಷೇತ್ರಕ್ಕೆ ದೇವರು ನೀಡಿದ ಕೊಡುಗೆ ಎಂದೇ ಬಣ್ಣಿಸಲಾಗುತ್ತದೆ. ಅವರ ಧ್ವನಿಯಲ್ಲಿನ ಮಾಂತ್ರಿಕತೆ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುವ ಶಕ್ತಿ ಹೊಂದಿತ್ತು. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗಕ್ಕೆ ಅವರು ಅಚ್ಚುಮೆಚ್ಚಿನ ಗಾಯಕರಾಗಿದ್ದರು.
ಶ್ರೀಲಂಕಾದಲ್ಲಿ ಅಂಧ ಪ್ರೊಫೆಸರ್ ಗೆ ಸರ್ಪ್ರೈಸ್ ನೀಡಿದ್ದ ಎಸ್.ಪಿ.ಬಿ
ಶ್ರೀಲಂಕಾದ ಪ್ರೊಫೆಸರ್ ಒಬ್ಬರು ಎಸ್.ಪಿ.ಬಿ ಅವರ ದೊಡ್ಡ ಅಭಿಮಾನಿ, ಅವರು ಒಮ್ಮೆ ಅಪಘಾತದಲ್ಲಿ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ರು, ಆದ್ರೆ ಅವ್ರ ಉಮ್ಮಸ್ಸು, ಉತ್ಸಾಹದಲ್ಲಿ ಯಾವುದೇ ಕೊರತೆಗಳು ಕಾಣಿಸಲಿಲ್ಲ ಮತ್ತು ಕಣ್ಣು ಕಳೆದುಕೊಂಡಿದ್ದರ ಬಗ್ಗೆ ಯಾವತ್ತು ಕೊರಗುತ್ತಾ ಕೂರಲಿಲ್ಲಾ, ಚಿಂತಿಸಲಿಲ್ಲ, ಒಮ್ಮೆ ಅವರನ್ನು ಶ್ರೀಲಂಕಾದ ಒಂದು ಸುದ್ದಿ ವಾಹಿನಿ ಸಂದರ್ಶನ ಮಾಡುತ್ತಿತ್ತು ಈ ವೇಳೆ ಪ್ರೊಫೆಸರ್ ಮಾತನಾಡುತ್ತ, ನನ್ನನ್ನು ಇನ್ನು ಜೀವಂತವಾಗಿರಿಸಿರುವುದು ಎಸ್.ಪಿ.ಬಿ ಅವರ ಹಾಡುಗಳು ನಾನು ಅವರ ದೊಡ್ಡ ಅಭಿಮಾನಿ ಎಂದಿದ್ದರು. ಎಸ್.ಪಿ.ಬಿ ಅವರು ಪ್ರೊಫೆಸರ್ ಬಗ್ಗೆ ವಿಷಯ ತಿಳಿದುಕೊಂಡರು, ಒಮ್ಮೆ ಎಸ್.ಪಿ.ಬಿ ಅವರು ಕಾರ್ಯಕ್ರಮದ ಭಾಗವಾಗಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು ಈ ವೇಳೆ ಎಸ್.ಪಿ.ಬಿ ಅವರು ಅಂಧ ಪ್ರೊಫೆಸರ್ ಮನೆಗೆ ಖುದ್ದು ಅವರೇ ಹೋಗಿ ಪ್ರೊಫೆಸರ್ ಮತ್ತು ಮನೆಯವರಿಗೆ ಅಚ್ಚರಿ ನೀಡಿದ್ದರು. ಪ್ರೊಫೆಸರ್ ಅವರ ಅಭಿಮಾನದ ಮುಂದೆ ನಾನು ತುಂಬಾ ಚಿಕ್ಕವನು, ಅವರ ಪ್ರೀತಿಗೆ ಅಭಿಮಾನಕ್ಕೆ ನಾನು ಚಿರಋಣಿ ಎಂದ್ದಿದ್ದರು ಎಸ್.ಪಿ.ಬಿ.
ಹೀಗೆ ಎಸ್.ಪಿ.ಬಿ ಎಷ್ಟೇ ಎತ್ತರಕ್ಕೆ ಬೆಳದಿದ್ದರು ಅವರ ಸರಳತೆ, ವಿನಮ್ರತೆ ಮತ್ತು ಮುಗ್ದತೆಯ ಗುಣಗಳು ಅವರನ್ನು ದೊಡ್ಡ ಸಾಧಕರ ಸಾಲಿನಲ್ಲಿ ನಿಲ್ಲಿಸಿವೆ. ಅವರ ವ್ಯಕ್ತಿತ್ವಕ್ಕೆ ಇದೊಂದು ಚಿಕ್ಕ ನಿದರ್ಶನ.
****