ಸ್ಯಾಂಡಲ್ ವುಡ್ ನ ನಟ ನಿರ್ದೇಶಕ ದುನಿಯಾ ವಿಜಯ್ ಅವರು ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಕೊಳ್ಳೇಗಾಲದಲ್ಲಿ ಅನಾವರಣಗೊಳಿಸಿದರು. ಇದು ದೇಶದಲ್ಲೇ ಎರಡನೇ ಅತೀ ಎತ್ತರದ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಯಾಗಿದ್ದು ಚಿತ್ರ ನಟ ದುನಿಯಾ ವಿಜಯ್ ಲೋಕಾರ್ಪಣೆ ಮಾಡಿದ್ದಾರೆ. ಭಾರತ ದೇಶದ ಸ್ವಾಭಿಮಾನದ ಸಂಕೇತವಾಗಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಆರಾಧಿಸುವ ಜನರು ದೇಶದೆಲ್ಲೆಡೆ ಇದ್ದಾರೆ ಅದರಂತೆ ದುನಿಯಾ ವಿಜಯ್ ಕೂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿ.
ಇತ್ತೀಚೆಗೆ ದುನಿಯಾ ವಿಜಯ್ ಅವರು ತಮ್ಮ ಚೊಚ್ಚಲ ನಿರ್ದೇಶನದ ಮತ್ತು ಅವರೇ ನಾಯಕನಾಗಿ ನಟಿಸಿರುವ ಸಲಗ ಚಿತ್ರದಲ್ಲಿ ಪ್ರಮೋಷನಲ್ ಹಾಡೊಂದನ್ನು ಸಿದ್ದಿ ಸಮುದಾಯದ ಮಹಿಳೆಯರೊಂದಿಗೆ ಹಾಡಿಸುವ ಮೂಲಕ ಆ ಸಮುದಾಯದ ಪ್ರತಿಭೆಗಳನ್ನು ಹೊರ ಜಗತ್ತಿಗೆ ಪರಿಚಯಿಸಿದ್ದು ಒಂದು ನಿದರ್ಶನ. ಸಾಕಷ್ಟು ಅವಮಾನ, ನಿಂದನೆಗಳನ್ನು ಅನುಭವಿಸಿ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯದಿಂದಲೇ ಚಿತ್ರರಂಗದಲ್ಲಿ ಬೆಳೆದಿರುವ ದುನಿಮಾ ವಿಜಿ ಅವರಿಗೆ ರಾಜ್ಯದೆಲ್ಲೆಡೆ ಅಭಿಮಾನಿ ವರ್ಗವಿದೆ. ಕೊಳ್ಳೆಗಾಲದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಮಾಡಿರುವುದು ಕೂಡ ವಿಜಯ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ದುನಿಯಾ ವಿಜಯ್ ಅವರ ಸಲಗ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಸರ್ಕಾರ ಅಕ್ಟೋಬರ್ 1 ರಿಂದ ಶೇ100% ಚಿತ್ರಮಂದಿರ ಭರ್ತಿಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ಸಿನಿಮಾ ಬಿಡುಗಡೆಗೆ ಸಿದ್ದತೆ ನಡೆಸಿದ್ದಾರೆ. ಸಲಗ ಚಿತ್ರದ ಹಾಡುಗಳು ಈಗಾಗಲೇ ಸದ್ದು ಮಾಡುತ್ತಿದ್ದು ವಿಜಿ ನಿರ್ದೇಶನದ ಸಲಗ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎಂದು ಅವರ ಅಭಿಮಾನಿಗಳು ಕಾತರರಾಗಿದ್ದಾರೆ.