ಡಾ.ರಾಜ್ ಕುಮಾರ್ ಅವರ ಮೊಮ್ಮಗಳು ಧನ್ಯ ರಾಮ್ ಕುಮಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವ ಸುದ್ದಿ ಈಗಾಗಲೇ ತಿಳಿದಿರುವ ವಿಷಯ, ಕೊರೊನಾ ಪರಿಸ್ಥಿತಿ ಸುಧಾರಿಸಿ ಥಿಯೇಟರ್ ಪೂರ್ಣ ಭರ್ತಿಗೆ ಅವಕಾಶ ಇದ್ದಿದ್ದರೆ ಇಷ್ಟರಲ್ಲಿ ಸೂರಜ್ ಗೌಡ ನಿರ್ದೇಶಿಸಿ ನಾಯಕನಾಗಿ, ಧನ್ಯಾ ರಾಮ್ ಕುಮಾರ್ ನಾಯಕಿಯಾಗಿ ನಟಿಸಿರುವ ನಿನ್ನ ಸನಿಹಕೆ ಚಿತ್ರ ಬಿಡುಗಡೆ ಆಗಿ ಸಿನಿ ರಸಿಕರ ಮುಂದೆ ಇಬ್ಬರ ನಟನೆ ಅನಾವರಣಗೊಳ್ಳುತ್ತಿತ್ತು. ಆದರೆ ಕೊರೋನಾ ಹಿನ್ನಲೆಯಲ್ಲಿ ಅದು ಸಾಧ್ಯ ಆಗಿರಲಿಲ್ಲ.
ಈಗ ಥಿಯೇಟರ್ ಶೇ 100% ಭರ್ತಿಗೆ ಅವಕಾಶ ನೀಡಿರುವ ಹಿನ್ನಲೆಯಲ್ಲಿ ನಿನ್ನ ಸನಿಹಕೆ ಚಿತ್ರ ತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ನಿಗದಿಗೊಳಿಸಿದೆ. ಮುಂದಿನ ತಿಂಗಳು ಅಕ್ಟೋಬರ್ 8 ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಚಿತ್ರ ತಂಡ ಘೋಷಣೆ ಮಾಡಿದೆ. ಈ ಹಿಂದೆ ವರಮಹಲಕ್ಷ್ಮಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಪ್ಲಾನ್ ಮಾಡಲಾಗಿತ್ತು, ಸಿನಿಮಾ ಮಂದಿರದ ಸಂಪೂರ್ಣ ಭರ್ತಿಗೆ ಅವಾಶ ಇಲ್ಲದ ಕಾರಣಕ್ಕೆ ಬಿಡುಗಡೆ ದಿನಾಂಕವನ್ನು ಬದಲಾವಣೆ ಮಾಡಲಾಗಿತ್ತು. ಚಿತ್ರದ ಹಾಡುಗಳು ಈಗಾಗಲೇ ಯೂಟ್ಯೂಬ್ ಮೂಲಕ ಬಿಡುಗಡೆ ಆಗಿ ಜನ ಮನ ಗೆದ್ದಿದೆ. ಅಕ್ಟೋಬರ್ 8 ಕ್ಕೆ ಪ್ರೇಕ್ಷಕರ ಮುಂದೆ ನಿನ್ನ ಸನಿಹಕೆ ಸಿನಿಮಾ ಬರಲಿದ್ದು ಡಾ ರಾಜ್ ಕುಟುಂಬದ ಕುಡಿ ಧನ್ಯಾ ಅವರನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂದು ಕಾದುನೋಡಬೇಕಿದೆ.
ಚಿತ್ರಕ್ಕೆ ರಘು ದೀಕ್ಷೀತ್ ಸಂಗೀತ, ಅಭಿಲಾಷ್ ಕಳತಿ ಛಾಯಾಗ್ರಹಣ ಮತ್ತು ಸುರೇಶ್ ಆರ್ಮುಗಂ ಸಂಕಲನವಿದೆ. ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕೂಡ್ಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
****