ಬಿಗ್ ಬಾಸ್ ಸೀಸನ್-8ರ ವಿಜೇತ ಮಂಜುಪಾವಗಡ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಜೀವ ಉಳಿಸಲು ಸೋಶಿಯಲ್ ಮೀಡಿಯಾದ ಮೂಲಕ ಸಹಾಯ ಮಾಡಲು ಕೋರಿದ್ದಾರೆ.
ಈ ಕುರಿತಂತೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋ ಶೇರ್ ಮಾಡಿರುವ ಮಂಜು, ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನವೀನ್ ಹಾಗೂ ಜ್ಯೋತಿ ದಂಪತಿಯ ಮಗು ಜನೀಶ್, ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ. ಮಗುವನ್ನು ಗುಣಪಡಿಸಲು ನಮ್ಮ ದೇಶದಲ್ಲಿ ಯಾವುದೇ ಚಿಕಿತ್ಸೆಗಳಿಲ್ಲ. ಚಿಕಿತ್ಸೆ ಕೊಡಿಸಲು ಬೇರೆ ದೇಶದಿಂದ ಒಂದು ಇಂಜೆಕ್ಷನ್ ತರಿಸಲು 16 ಕೋಟಿಯಾಗುತ್ತದೆ. ಈಗಾಗಲೇ 8 ಕೋಟಿ ರೂ ಸಂಗ್ರಹಿಸಲಾಗಿದೆ. ಆದರೆ ಇನ್ನೂ 3 ತಿಂಗಳ ಒಳಗೆ ಮತ್ತೆ 8 ಕೋಟಿ ಬೇಕಾಗಿದೆ. ಹಾಗಾಗಿ ಆದಷ್ಟು ಬೇಗ ನಿಮ್ಮ ಕೈಯಲ್ಲಿ ಆದಷ್ಟು ಹಣ ಸಹಾಯ ಮಾಡಿ ಹಾಗೂ ನಮ್ಮ ಕೈಯಲ್ಲಿ ಕೂಡ ಆದಷ್ಟು ಸಹಾಯ ಮಾಡಿ ಆ ಮಗುವನ್ನು ಉಳಿಸಿಕೊಳ್ಳೋಣ ಎಂದು ಕೈಮುಗಿದು ಬೇಡಿಕೊಂಡಿದ್ದಾರೆ.
ಮಗು ತುಂಬಾ ಕಷ್ಟದಲ್ಲಿದ್ದು, ಅದನ್ನು ನೋಡಲು ಸಹ ಸಾಧ್ಯವಾಗುತ್ತಿಲ್ಲ. ಆ ಮಗುವನ್ನು ಉಳಿಸಿ, ಮಗುವಿನ ಮುಖದಲ್ಲಿ ನಗುವನ್ನು ತರಿಸಿ ಎಂದಿದ್ದಾರೆ. ಮಗುವಿನ ಪೋಷಕರು ಮಗುವಿಗೆ 17 ತಿಂಗಳಾಗಿದ್ದರೂ ಕತ್ತು ನಿಂತಿಲ್ಲ, ಪೈಪ್ ಮೂಲಕವೇ ಊಟ ನೀಡುತ್ತಿದ್ದೇವೆ. ಈ ಕಾಯಿಲೆ ಬಂದರೆ ಮಗು ಉಳಿಯುವುದು ಬಹಳ ಕಷ್ಟ. ಕನಿಷ್ಠ 2 ವರ್ಷ ಬದುಕಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಇದು ನಿಮ್ಮ ಮನೆಯ ಮಗು ಅಂದುಕೊಂಡು ಮರು ಜನ್ಮ ನೀಡಿ. ಕಾಲಾವಕಾಶ ಬಹಳ ಕಡಿಮೆ ಇದೆ. ದಯವಿಟ್ಟು ಮಗುವನ್ನು ಉಳಿಸಿಕೊಡಿ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
****