ಕೊರೊನಾ ಕಾಲದ ಸಂಕಷ್ಟಗಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ, ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಾ ಬರುತ್ತಿದ್ದರೂ ಕೊರೊನಾ ದಿಂದ ಆಗಿರುವ ಆರ್ಥಿಕ ದಿವಾಳಿಯನ್ನು ಸರಿದೂಗಿಸಲು ಸಾಕಷ್ಟು ಸಮಯವೇ ಬೇಕಾದೀತು. ಅದರಲ್ಲೂ ಚಿತ್ರರಂಗವಂತೂ ಚೇತರಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಮೊದಲ ಅಲೆ ಮುಗಿದು ಇನ್ನೇನು ಎಂದಿನ ಸ್ಥಿತಿಗೆ ಚಿತ್ರರಂಗ ಮರಳಿತು ಎನ್ನುವಾಗಲೇ 2ನೇ ಅಲೆಯಿಂದ ಚಿತ್ರರಂಗಕ್ಕೆ ಮತ್ತೆ ಸಂಕಷ್ಟ ಎದುರಾಯಿತು.
ಚಿತ್ರಮಂದಿರಗಳಿಗೆ ಸರಿಯಾಗಿ ಅನುಮತಿ ಸಿಗುತ್ತಿಲ್ಲ. ಶೇ.100 ಆಸನ ಭರ್ತಿ ಅನುಮತಿ ಇಲ್ಲದೇ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಇದರಿಂದ ಚಿತ್ರಮಂದಿರಳಿಗೆ ದೊಡ್ಡ ಹೊಡೆತ ಬಿದ್ದಿದೆ. ಆ ಪರಿಣಾಮ ಜನಪ್ರಿಯ ಚಿತ್ರಮಂದಿರವೊಂದು ಬಾಗಿಲು ಮುಚ್ಚುತ್ತಿದೆ. ಹೌದು, ಮಹಾಮಾರಿ ಕೊರೊನಾ ಸಂಕಷ್ಟದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನ ಚಿತ್ರಮಂದಿರಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಕೋವಿಡ್ ಹೊಡೆತದಿಂದಾಗಿ ಮೈಸೂರಿನ ಸರಸ್ವತಿ ಚಿತ್ರಮಂದಿರ ತನ್ನ ಪ್ರದರ್ಶನ ನಿಲ್ಲಿಸುವ ಮೂಲಕ ಇತಿಹಾಸದ ಪುಟ ಸೇರಿದೆ. ಕೊರೊನಾ ಸಂಕಷ್ಟದಲ್ಲಿ ಸತತ ಒಂದೂವರೆ ವರ್ಷದಿಂದ ಚಿತ್ರಮಂದಿರ ತೆರೆಯದ ಕಾರಣ, ಈ ಹಳೆಯ ಚಿತ್ರಮಂದಿರ ಶಾಶ್ವತವಾಗಿ ಬಾಗಿಲು ಮುಚ್ಚುವಂತಾಗಿದೆ.
ಮೈಸೂರಿನ ಜನರಿಗೆ ಅತ್ಯಂತ ಚಿರಪರಿಚಿತವಾಗಿದ್ದ ಶಾಂತಲಾ, ಲಕ್ಷ್ಮಿ, ಶ್ರೀನಾಗರಾಜ ಚಿತ್ರಮಂದಿರಗಳು ಈಗಾಗಲೇ ಬಂದ್ ಆಗಿವೆ. ಇದೀಗ ಇದೇ ಸಾಲಿಗೆ ಸರಸ್ವತಿ ಚಿತ್ರಮಂದಿರವು ಸಹ ಸೇರ್ಪಡೆ ಆಗಿದೆ. ಪರಿಸ್ಥತಿ ಹೀಗೆ ಮುಂದುವರೆದರೆ ಮತ್ತಷ್ಟು ಚಿತ್ರಮಂದಿರಗಳು ಇದೆ ದಾರಿ ತುಳಿದು ಇತಿಹಾಸದ ಪುಟ ಸೇರುವ ದಿನಗಳು ತುಂಬ ದೂರವಿಲ್ಲ.
****