ಕೊರೊನಾ ಎಂಬ ವೈರಾಣು ಕಳೆದೆರಡು ವರ್ಷದಿಂದ ಏನೆಲ್ಲಾ ಅವಾಂತರ ಸೃಷ್ಟಿಸಿತ್ತು ಎಂಬುದನ್ನ ನಾವು ಕಣ್ಣಾರೆ ನೋಡಿದ್ದೇವೆ, ನೋಡಿದ್ದು ಮಾತ್ರವಲ್ಲ ಅದು ಸೃಷ್ಟಿಸಿದ ಭೀಕರತೆಯನ್ನು ಸ್ವತಃ ಅನುಭವಿಸಿದ್ದೇವೆ. ಈಗ ಕೊರೊನಾ ಪ್ರಕರಣಗಳು ಇಳಿಮುಖವಾಗಿ ಬಹುತೇಕ ಆರ್ಥಿಕ ಚಟುವಟಿಕೆಗಳೆಲ್ಲವೂ ತೆರೆದುಕೊಳ್ಳುತ್ತಿವೆ. ಆದರೆ ಚಿತ್ರೋದ್ಯಮ ಮಾತ್ರ ಸಂಕಷ್ಟದಲ್ಲೇ ಇದೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಪ್ರಮಾಣವನ್ನು ಶೇ.100ಕ್ಕೆ ಹೆಚ್ಚಿಸುವಂತೆ ಕನ್ನಡ ಚಿತ್ರರಂಗದ ನಿರ್ಮಾಪಕರು ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ‘ಭಜರಂಗಿ 2’ ಚಿತ್ರದ ನಿರ್ಮಾಪಕ ಜಯಣ್ಣ, ಸಲಗ ಸಿನಿಮಾ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಕೋಟಿಗೊಬ್ಬ 3 ಚಿತ್ರಕ್ಕೆ ಬಂಡವಾಳ ಹೂಡಿರುವ ಸೂರಪ್ಪ ಬಾಬು ಸೇರಿದಂತೆ ಹಲವರ ಜೊತೆ ಸಚಿವ ಸುಧಾಕರ್ ಸಭೆ ನಡೆಸಿದ್ದಾರೆ. ಶೇ.100ರಷ್ಟು ಆಸನ ಭರ್ತಿಗೆ ಸರ್ಕಾರದಿಂದ ಅನುಮತಿ ಸಿಗುವ ಸಾಧ್ಯತೆ ಹೆಚ್ಚಿದೆ.
ಚಿತ್ರಮಂದಿರಗಳನ್ನೇ ನಂಬಿಕೊಂಡು ಅನೇಕ ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ ಕೊರೊನಾ ಕಾರಣದಿಂದ ಚಿತ್ರಮಂದಿಗಳು ನಷ್ಟ ಅನುಭವಿಸುತ್ತಿರುವುದರಿಂದ ಹಲವರ ಹೊಟ್ಟೆಪಾಡು ಕಷ್ಟವಾಗಿದೆ. ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಕ್ಕು, ಸ್ಟಾರ್ ಸಿನಿಮಾಗಳು ಬಿಡುಗಡೆಯಾದರೆ ಪರಿಸ್ಥಿತಿ ಸುಧಾರಿಸಲಿದೆ..ಚಿತ್ರಮಂದಿರಗಳ ಶೇ 100% ಭರ್ತಿಗೆ ಸರ್ಕಾರ ಅನುಮತಿ ನೀಡಿ ಕಾರ್ಮಿಕರ ಬದುಕಿಗೆ ಆಸರೆಯಾಗಬೇಕೆಂದು ಕನ್ನಡ ಪಿಚ್ಚರ್ ಕೂಡ ಅಭಿಯಾನದ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತದೆ.