ಪಂಡರಿಬಾಯಿ ‘ಪಂಡರಿ ಅಮ್ಮಾ ‘ ಎಂದೆ ಕನ್ನಡ ಚಿತ್ರರಂಗ ಸದಾ ನೆನೆಪಿನಲ್ಲಿಡುವ ಮೇರು ನಟಿ. ಪಂಡರಿ ಅಮ್ಮ ಬದುಕಿದ್ದರೆ ಇಂದಿಗೆ 93ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ‘ಆಡು ಮುಟ್ಟದ ಸೊಪ್ಪಿಲ್ಲಾ’ ಎನ್ನುವ ಹಾಗೆ ಪಂಡರಿ ಅಮ್ಮ ಮಾಡದ ಪಾತ್ರಗಳಿಲ್ಲಾ ಮತ್ತು ಕನ್ನಡ ಚಿತ್ರರಂಗದ ಇತಿಹಾಸವನ್ನು ಮೊದಲ ಪುಟದಿಂದ ಇವತ್ತಿನವರೆಗೆ ತಿರುವಿಹಾಕಿ ; ಎಂ.ವಿ.ರಾಜಮ್ಮ ಅವರನ್ನು ಬಿಟ್ಟರೆ ಪಂಡರಿಬಾಯಿ ಸಮಕ್ಕೆ ನಟಿಸಬಲ್ಲ – ಪಂಡರಿಬಾಯಿ ಮಟ್ಟಿಗೆ ಜನಪ್ರಿಯತೆ ಗಳಿಸಿದ ಮತ್ತೊಬ್ಬ ಅಮ್ಮನಿಲ್ಲ .
ಕನ್ನಡ,ಹಿಂದಿ,ತಮಿಳು ಮತ್ತು ತೆಲಗು ಸೇರಿ ಸುಮಾರು 1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕದ ಕರಾವಳಿ ಪ್ರದೇಶ ಭಟ್ಕಳದಲ್ಲಿ ಜನಿಸಿದ ಇವರು ತಂದೆಯ ಪ್ರಭಾವದಿಂದ ಕೇವಲ ಹತ್ತು ವರ್ಷದವರಿದ್ದಾಗಲೆ ಹರಿಕಥೆ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದರು.
ಸುಮಾರು 6 ದಶಕಗಳ ಕಾಲ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದ ಹೆಣ್ಣುಮಗಳು ಪಂಡರಿಬಾಯಿ. ಆಕೆ ನಟಿಯಷ್ಟೇ ಅಲ್ಲ – ನಿರ್ಮಾಪಕಿ, ರಂಗ ಕರ್ಮಿಯೂ ಹೌದು. ಪಂಡರಿಬಾಯಿ ನಿರ್ಮಿಸಿದ ‘ರಾಯರ ಸೊಸೆ’ ಸಿನಿಮಾ ಅವರಿಗೆ ಹೆಸರು ತಂದುಕೊಟ್ಟಿತ್ತು . ಜಿ.ವಿ. ಅಯ್ಯರ್ ಅವರೊಂದಿಗೆ ಪಂಡರಿಬಾಯಿ ಜಂಟಿಯಾಗಿ ನಿರ್ಮಿಸಿರುವ ‘ಶ್ರೀಕೃಷ್ಣ ಲೀಲೆ’ ಇನ್ನೂ ತೆರೆ ಕಾಣಬೇಕಿದೆ. ಕಿರುತೆರೆಯಲ್ಲೂ ಪಂಡರಿಬಾಯಿ ನಟಿಸಿದ್ದರು. ಸಿನಿಮಾ ಮೇಲೆ ಟೀವಿ ಸವಾರಿ ಪ್ರಾರಂಭಿಸಿದ ದಿನಗಳಲ್ಲಿ ಪಂಡರಿಬಾಯಿ ಅವರ ಬಳಗ ನಿರ್ಮಿಸಿದ ‘ಮನೆತನ’ ಮೆಗಾ ಧಾರಾವಾಹಿಯಲ್ಲಿ ಪಂಡರಿಬಾಯಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ‘ಮನೆತನ’ ಕನ್ನಡದ ಮೊದಲ ಮೆಗಾ ಸೀರಿಯೆಲ್.

ಡಾ.ರಾಜಕುಮಾರ್ರ ಮೊದಲ ಚಿತ್ರ `ಬೇಡರ ಕಣ್ಣಪ್ಪ’ ಮತ್ತು ತಮಿಳು ನಟ ಶಿವಾಜಿ ಗಣೇಶನ್ರ ಮೊದಲ ಚಿತ್ರ `ಪರಶಕ್ತಿ’ಯಲ್ಲಿ ನಾಯಕಿಯಾಗಿದ್ದು ನಟಿಸಿದ್ದು ಪಂಡರಿಬಾಯಿಯವರು. ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ನಟರೊಂದಿಗೂ ಪರದೆ ಹಂಚಿಕೊಂಡಿದ್ದಾರೆ. ಮೇರು ನಟರಾದ ಡಾ.ರಾಜಕುಮಾರ್,ತಮಿಳಿನ ಎಂಜಿಆರ್ ಮತ್ತು ತೆಲುಗಿನ ಎನ್ಟಿಆರ್ ರೊಂದಿಗೆ ನಾಯಕನಟಿಯಾಗಿ ಮತ್ತು ತಾಯಿಯಾಗಿ ನಟಿಸಿದ್ದು ವಿಶೇಷ. ಪಂಡರಿಬಾಯಿಯವರು ನಟಿಸಿದ ಕೊನೆಯ ಚಿತ್ರ ಶಶಿಕುಮಾರ್ ನಟನೆಯ `ಬಾರೋ ನನ್ನ ಮುದ್ದಿನ ಕೃಷ್ಣ’ . ಪಿ.ಎಚ್.ರಾಮಾರಾವ್ರನ್ನು ವಿವಾಹವಾಗಿದ್ದ ಪಂಡಿರಿಬಾಯಿಯವರು 2003 ರಲ್ಲಿ ಚೆನ್ನೈನಲ್ಲಿ ವಿಧಿವಶರಾದರು. ಪಂಡರಿಬಾಯಿಯವರು ನಮ್ಮೊಂದಿಗಿಲ್ಲದಿದ್ದರು ಅವರು ಮಾಡಿರುವ ಮನೊಜ್ಞ ಅಭಿನಯದ ಮೂಲಕ ಸದಾ ಜೀವಂತವಾಗಿರುತ್ತಾರೆ. ಇಂದು ಅವರ 93 ನೇ ಜನ್ಮ ದಿನದ ಸಂದರ್ಭದಲ್ಲಿ ಕನ್ನಡ ಪಿಚ್ಚರ್ ತಂಡ ಪಂಡರಿಬಾಯಿ ಅಮ್ಮನನ್ನು ಸ್ಮರಿಸುತ್ತಿದೆ.
****