ಯೋಗರಾಜ್ ಭಟ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್-ದಿಗಂತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಗಾಳಿಪಟ 2 ಸಿನಿಮಾ ಶೂಟಿಂಗ್ ಮತ್ತೆ ಆರಂಭವಾಗಲಿದೆ. ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಚಿತ್ರೀಕರಣ ನೆನೆಗುದಿದೆ ಬಿದ್ದಿತ್ತು.
ಕಳೆದ ಬಾರಿ ಲಾಕ್ ಡೌನ್ ಮುಗಿದ ಮೇಲೆ ಕೆಲವು ಭಾಗದ ಚಿತ್ರೀಕರಣ ನಡೆಸಲಾಗಿತ್ತು.ಈಗ ಮತ್ತೆ ನಾಳೆಯಿಂದ ಬಾಕಿ ಉಳಿದ ಭಾಗಗಳ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ. ಸಿನಿಮಾದ ಶೇ.70 ಭಾಗದ ಶೂಟಿಂಗ್ ಈಗಾಗಲೇ ಪೂರ್ತಿಯಾಗಿದೆ.. ಇದೀಗ ಕೊರೋನಾ ಸೊಂಕು ನಿಯಂತ್ರಣಕ್ಕೆ ಬಂದಿರುವ ಹಿನ್ನಲೆಯಲ್ಲಿ ಮತ್ತೆ ಚಿತ್ರೀಕರಣ ಪ್ರಾರಂಭಿಸಲಾಗುತ್ತಿದೆ.
ಈ ಹಿಂದೆ 2008 ರಲ್ಲಿ ತೆರೆ ಕಂಡಿದ್ದ ಗಾಳಿಪಟ ಚಿತ್ರ ಸೂಪರ್ ಹಿಟ್ ಆಗಿತ್ತು, ಆಗ ಗಣೇಶ್, ದಿಗಂತ್ ಮತ್ತು ರಾಜೇಶ್ ಕೃಷ್ಣನ್ ಅವರ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೀಗ ಗಾಳಿಪಟ-2ನಲ್ಲಿ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯ ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ ಮನಸಾರೆ ಮತ್ತು ಪಂಚರಂಗಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನಂತ್ ನಾಗ್ ಈ ಸಿನಿಮಾದಲ್ಲಿ ಟೀಚರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದನ್ನು ಭಟ್ಟರು ಈ ಹಿಂದೆಯೇ ಬಹಿರಂಗಪಡಿಸಿದ್ದರು.
ಈಗ ಮತ್ತೆ ಯೋಗರಾಜ್ ಭಟ್ರು ಎರಡನೆ ಗಾಳಿಪಟ ಹಾರಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದ್ದು ಭಟ್ರು ಗಾಳಿಪಟ 2 ಹೇಗೆ ಹಾರಿಸುತ್ತಾರೆ ಎಂದು ಕಾದುನೋಡಬೇಕಿದೆ.
****