ಇದೇ ಸೆಪ್ಟೆಂಬರ್ 9ರಂದು ತೆಲಂಗಾಣದ ಸೈದಾಬಾದ್ನಲ್ಲಿ ನಡೆದ ಆರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ದುಷ್ಕೃತ್ಯ ನಡೆಸಿದ ಆರೋಪಿಯನ್ನು ಎನ್ಕೌಂಟರ್ ಮೂಲಕ ಹತ್ಯೆ ಮಾಡಬೇಕೆಂಬ ಕೂಗು ಕೇಳಿಬಂದಿತ್ತು.
ತೆಲುಗು ಸೂಪರ್ಸ್ಟಾರ್ ‘ಮಹೇಶ್ ಬಾಬು’ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಆರು ವರ್ಷ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣವು ನಮ್ಮ ಸಮಾಜ ಎಷ್ಟು ಕುಸಿದಿದೆ ಅನ್ನೋದನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ನಮ್ಮ ಹೆಣ್ಣು ಮಕ್ಕಳು ಸುರಕ್ಷಿತವಾಗಿದ್ದಾರೆಯೇ..? ಈ ಪ್ರಶ್ನೆಯೂ ಎಂದಿಗೂ ನನ್ನನ್ನು ಕಾಡಲಿದೆ. ಕರುಳು ಹಿಂಡಿದಂತೆ ಆಗುತ್ತದೆ. ಆ ಕುಟುಂಬದ ಸ್ಥಿತಿ ಹೇಗಿರಬಹುದು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಆರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದಿದ್ದ ಆರೋಪಿಯನ್ನು ಬಂಧಿಸಿ, ಎನ್ ಕೌಂಟರ್ ಮಾಡುವುದಾಗಿ ತೆಲಂಗಾಣ ಸಚಿವ ಮಲ್ಲ ರೆಡ್ಡಿ ಬಹಿರಂಗವಾಗಿ ಭರವಸೆ ನೀಡಿದ್ದ ಎರಡು ದಿನಗಳ ನಂತರ ಆರೋಪಿಯ ಶವ ಹೈದರಾಬಾದ್ ನ ರೈಲ್ವೆ ಹಳಿ ಮೇಲೆ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
****