ಇಷ್ಟು ದಿನ ಜ್ಯೂನಿಯರ್ ಚಿರು ಎಂದೇ ಫೇಮಸ್ ಆಗಿದ್ದ ಜ್ಯೂನಿಯರ್ ಚಿರುಗೆ ಇಂದು ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಜ್ಯೂನಿಯರ್ ಚಿರುಗೆ ರಾಯನ್ ಸರ್ಜಾ ಎಂದು ಅದ್ಧೂರಿಯಾಗಿ ನಾಮಕರಣ ಮಾಡಲಾಗಿದೆ. ಸಂಸ್ಕೃತದಲ್ಲಿ ರಾಯನ್ ಅಂದರೆ ಯುವರಾಜ ಎಂಬ ಅರ್ಥವಿದೆ.

ಇಷ್ಟು ದಿನ ಚಿಂಟು, ಸಿಂಬಾ, ಪಾಪ ಕುಟ್ಟಿ, ಜೂನಿಯರ್ ಚಿರು, ಜ್ಯೂನಿಯರ್ ಸಿಂಗ ಹೀಗೆ ಹಲವಾರು ಮುದ್ದಾದ ಹೆಸರುಗಳಲ್ಲಿ ಕುಟುಂಬದವರು ಹಾಗೂ ಅಭಿಮಾನಿಗಳು ಪ್ರೀತಿಯಿಂದ ಚಿರು ಪುತ್ರನನ್ನು ಕರೆಯುತ್ತಿದ್ದರು. ಆದರೆ ಸೆಪ್ಟೆಂಬರ್ 3 ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಕುಟುಂಬದವರು ರಿವೀಲ್ ಮಾಡಲು ನಿರ್ಧರಿಸಿರುವುದಾಗಿ ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದರು.

ಕಳೆದ ವರ್ಷ ಜೂನ್ 7ರಂದು ಚಿರು ನಿಧನರಾದ ಬಳಿಕ ದುಃಖದಲ್ಲಿದ್ದ ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದಲ್ಲಿ ಜ್ಯೂ. ಚಿರು ಆಗಮನದಿಂದ ಮತ್ತೆ ನಗು ಅರಳಿತ್ತು. ಸೋಶಿಯಲ್ ಮೀಡಿಯಾದಲ್ಲಿ ಮಗನ ಫೋಟೋ ಮತ್ತು ವಿಡಿಯೋಗಳನ್ನು ಮೇಘನಾ ರಾಜ್ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.
****