ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಇಂದು 49 ನೇ ಹುಟ್ಟುಹಬ್ಬದ ಸಂಭ್ರಮ. ಸ್ಪರ್ಶ ಸಿನಿಮಾದಲ್ಲಿ ನಾಯಕ ನಟನಾಗಿ ಚಂದನವನಕ್ಕೆ ಪಾದರ್ಪಣೆ ಮಾಡಿದ ಕಿಚ್ಚ ಸುದೀಪ್ ಸದ್ಯ ಬಹುಭಾಷಾ ನಟರಾಗಿ ಮಿಂಚುತ್ತಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿರುವ ಸುದೀಪ್‍ರವರು ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2003ರಲ್ಲಿ ಸುದೀಪ್‍ರವರು ತಮ್ಮ ಗೆಳತಿ ಪ್ರಿಯಾ ಜೊತೆ ಸಪ್ತಪದಿ ತುಳಿದರು. ಸದ್ಯ ಈ ಮುದ್ದಾದ ಜೋಡಿಗೆ ಇದೀಗ ಸಾನ್ವಿ ಎಂಬ ಮಗಳಿದ್ದಾರೆ.


ಸುದೀಪ್‍ರವರಿಗೆ ಮೊದಲಿನಿಂದಲೂ ಕ್ರಿಕೆಟಿಗನಾಗಬೇಕೆಂಬ ಆಸೆ ಇತ್ತು. ಆದರೆ ಸುದೀಪ್ ಮುಖಮಾಡಿದ್ದು, ಮಾತ್ರ ಚಿತ್ರರಂಗದ ಕಡೆ. ಕನ್ನಡ ಚಿತ್ರರಂಗವು ಇಷ್ಟು ಎತ್ತರಕ್ಕೆ ಬೆಳಸಲು ಶ್ರಮಿಸಿದ ಹಲವಾರು ನಟರ ಮಧ್ಯೆ ಸುದೀಪ್ ಕೂಡ ಒಬ್ಬರು. ತಮ್ಮ ಸಿನಿ ಜರ್ನಿಯಲ್ಲಿ ಸಾಕಷ್ಟು ಏಳು ಹಾಗೂ ಬೀಳುಗಳನ್ನು ಕಂಡರೂ ಸುದೀಪ್ ಇದೀಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಾ, ಎಲ್ಲೆಡೆ ಕನ್ನಡಿಗರ ಪ್ರತಿಭೆಯನ್ನು ಬಿಂಬಿಸುತ್ತಿದ್ದಾರೆ.

ನಾಯಕ ನಟರಾಗಿ ಮಾತ್ರವಲ್ಲದೇ ಖಳ ನಾಯಕನ ಪಾತ್ರದಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡ ಸುದೀಪ್‍ಗೆ ಇದೀಗ ಕರ್ನಾಟಕದಲ್ಲಿ ಮಾತ್ರವಲ್ಲದೇ ಹಲವು ಚಿತ್ರರಂಗಗಳಲ್ಲಿಯೂ ಅಪಾರ ಅಭಿಮಾನಿ ಬಳಗವಿದೆ. ಸದ್ಯ ಸುದೀಪ್ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ 25 ವರ್ಷ ಪೂರೈಸಿದ್ದು, ಈ ಸಂಭ್ರಮವನ್ನು ದುಬೈನಲ್ಲಿ ಆಚರಿಸಿದ್ದರು.
****