ಡಿಸೈನರ್ ಸಂತೋಷ್ ಅವರು ಮೆಮೆಂಟೊ ತಯಾರಿಕಾ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ, ಮೊದಲ 3 ವರ್ಷ ಬೇರೆ ಬೇರೆ ಕ್ಷೇತ್ರಗಳ ಕಾರ್ಯಕ್ರಮಗಳಿಗೆ ಮೆಮೆಂಟೊಗಳನ್ನು ರೆಡಿ ಮಾಡಿಕೊಡ್ತಿದ್ರು, ಸಂತೋಷ್ ಅವರು ಮಾಡುತ್ತಿದ್ದ ಕ್ರಿಯೇಟೀವ್ ಡಿಸೈನ್ ಗಳಿಗೆ ಕನ್ನಡ ಚಿತ್ರರಂಗದಿಂದಲೂ ಬೇಡಿಕೆ ಬರಲು ಪ್ರಾರಂಭವಾಯಿತಂತೆ ಮೊದಲ ಬಾರಿಗೆ ರಥಾವರ ಚಿತ್ರಕ್ಕೆ ಇವರು ಮಾಡಿದ ಡಿಸೈನ್ ಎಲ್ಲರಿಗೂ ಮೆಚ್ಚಿಗೆಯಾಗಿ ನಂತರ ಕನ್ನಡ ಚಿತ್ರರಂದಲ್ಲಿ ನಡೆಯುವ ಶತದಿನೋತ್ಸವ ಕಾರ್ಯಕ್ರಮ, 50 ದಿನಗಳ ಸಂಭ್ರಮ ಹೀಗೆ ವಿವಿಧ ಕಾರ್ಯಕ್ರಮಕ್ಕೆ ಮೆಮೆಂಟೊಗಳನ್ನು ಮಾಡಿಕೊಟ್ಟಿದ್ದಾರೆ. ಅದಕ್ಕೂ ಮೊದಲುಸುವರ್ಣ ಚಾನೆಲ್ ನಲ್ಲಿ ಬರುತ್ತಿದ ಸೂಪರ್ ಜೋಡಿ ಕಾರ್ಯಕ್ರಮಕ್ಕೆ ಮಾಡಿಕೊಟ್ಟಿದ್ದರಂತೆ.
ಮೈಲಾರಿ ಚಿತ್ರದ ಚಂದ್ರು ಮೂಲಕ ಸಂಪರ್ಕ ಸಿಕ್ಕ ಸಂದರ್ಭದಲ್ಲಿ ವುಡನ್ ಬೇಸ್ ಬಳಸಿಕೊಂಡು ಮೆಮೆಂಟೊ ಮಾಡುತ್ತಿದ್ದರಂತೆ, ಆದರೆ ಅದೇಕೊ ಸಂತೋಷ್ ಅವರ ಮನಸಿಗೆ ತೃಪ್ತಿ ಕೊಡುತ್ತಿರಲಿಲ್ಲವಂತೆ, ಅದರಲ್ಲೂ ಸಿನಿಮಾ ಎಂದರೆ ಕಲರ್ ಫುಲ್ ನಾವು ಅದಕ್ಕೆ ಅಷ್ಟೇ ನ್ಯಾಯ ಒದಗಿಸಬೇಕು ಮತ್ತು ಯಾರು ಮಾಡಿರದ ರೀತಿಯಲ್ಲಿ ಮಾಡಬೇಕು ಎಂದು ನಿಶ್ಚಯಿಸಿಕೊಂಡು ಹುಡುಕಾಟ ನಡೆಸಿದರೆಂತೆ ನಂತರ ಚೆನ್ನೈನಲ್ಲಿ ನಡೆಯುತ್ತಿದ್ದ ಒಂದು ಎಕ್ಸಿಭಿಶನ್ ನಲ್ಲಿ ಹೊಸ ಬಗೆಯ ತಂತ್ರಜ್ಞಾನದ ಬಳಸಿಕೊಂಡು ಮಾಡುತ್ತಿದ್ದ ವಿಧಾನ ಇಷ್ಟವಾಗಿ ಚೀನಾದಿಂದ ಉಪಕರಣ ತರಿಸಿದ್ರಂತೆ. ಲೇಸರ್ ಕಟ್ಟಿಂಗ್ ಮೂಲಕ ಎಲ್ಲವೂ ನಡೆಯುವುದರಿಂದ ಯಾವುದೂ ವೇಸ್ಟ್ ಆಗುವುದಿಲ್ಲವಂತೆ ಮತ್ತು ಫಿನೀಷಿಂಗ್ ಕೂಡ ಅಷ್ಟೆ ಚೆಂದವಾಗಿ ಬರುವುದರ ಜೊತೆಗೆ ಆಕ್ರಲಿಕ್ ಬೇಸ್ ಬಳಸುವುದರಿಂದ ಕೈಯಲ್ಲಿ ಮೆಮೆಂಟೊ ಹಿಡಿದುಕೊಂಡವರಿಗೆ ಗುಡ್ ಫೀಲ್ ಕೊಡುವಂತಿರುತ್ತದೆ ಎಂಬುದು ಸಂತೋಷ್ ಅವರ ಮಾತು.

ಕುರುಬರಹಳ್ಳಿಯ ಬಸ್ ನಿಲ್ದಾಣದ ಹತ್ತಿರ ಇರುವ ಡಾ.ರಾಜ್ ಕುಮಾರ್ ಅವರ ಪುತ್ತಳಿಯನ್ನು ಸಂತೋಷ್ ಮತ್ತವರ ತಂಡ ಮಾಡಿದ್ದು, ಸಂತೋಷ್ ಅವರಿಗೆ ಆ ಕೆಲಸ ಮಾಡಿರುವ ಬಗ್ಗೆ ಧನ್ಯತಾ ಭಾವ, ಮಾತಿನಲ್ಲಿ ತೃಪ್ತಿಯ ಭಾವ ಕಾಣುತ್ತಿತ್ತು. ನಂತರ ಯಾವುದೇ ಸಿನಿಮಾ ರಿಲೀಸ್ ಆದರೂ ಮೆಮೆಂಟೊ ಗೆ ಆರ್ಡರ್ ಇರಲಿ ಇಲ್ಲದಿರಲಿ ಇವರೇ ಖುದ್ದು ಆಸಕ್ತಿವಹಿಸಿ ಅದರ ಟೈಟಲ್ ಒಳಗೊಂಡ ಮೆಮೆಂಟೊ ರೆಡಿ ಮಾಡುತ್ತಾರಂತೆ, ಕೆಲವೊಮ್ಮೆ ಅದು ಚಿತ್ರತಂಡಕ್ಕೆ ಇಷ್ಟವಾಗಿ ಮೆಮೆಂಟೊ ಮಾಡಲು ಹೇಳುತ್ತಾರಂತೆ. ಸಲಗ, ಕಬ್ಜ, ಮದಗಜ,ಟಗರು ಹೀಗೆ ಇನ್ನು ಹಲವಾರು ಚಿತ್ರಗಳಿಗೆ ಮೆಮೆಂಟೊ ರೆಡಿ ಮಾಡಿದ್ದಾರೆ. ಮೊದೆಲೆಲ್ಲಾ ಚಿತ್ರ 100 ದಿನ 50 ದಿನ ಆಗಿದ್ರೆ ಮಾತ್ರ ಕೊಡುತ್ತಿದ್ದರು ಆದರೆ ಈಗ ಶೂಟಿಂಗ್ ಕಂಪ್ಲೀಟ್ ಆದ ಕೂಡಲೆ ನೆನಪಿನ ಕಾಣಿಕೆ ಕೊಡುವ ಪ್ರಾಕ್ಟೀಸ್ ಶುರುವಾಗಿದೆ ಎನ್ನುತ್ತಾರೆ ಡಿಸೈನರ್ ಸಂತೋಷ್. ಇತ್ತೀಚೆಗೆ ಮದಗಜ ಚಿತ್ರದ ಶೂಟ್ ಮುಗಿದ ಹಿನ್ನಲೆಯಲ್ಲಿ ನಿರ್ದೇಶಕ ಮಹೇಶ್ ಕುಮಾರ್ ಅವರು ಎಲ್ಲರಿಗೂ ಮೆಮೆಂಟೊ ನೀಡಿ ಸಂಭ್ರಮಿಸಿದ್ದು ಸುದ್ದಿಯಾಗಿತ್ತು.
ಈ ಕೊರೊನಾ ಆತಂಕ ದೂರವಾಗಿ ಪ್ರೇಕ್ಷಕ ಪ್ರಭು ಚಿತ್ರಮಂದಿರಕ್ಕೆ ಬರುವಂತಾಗಲಿ, ಶಿಳ್ಳೆ ಚಪ್ಪಾಳೆ ಹೊಡೆಯುತ್ತ ಭರ್ತಿ ತುಂಬಿದ ಸಿನಿಮಾ ಥಿಯೇಟರ್ ನ ಮೊದಲಿನ ವೈಭವ ಮರುಕಳಿಸಿ ಕನ್ನಡ ಸಿನಿಮಾಗಳು ಶತದಿನೋತ್ಸವ ಆಚರಿಸಿ ಎಲ್ಲರಿಗೂ ನೆನಪಿನಲ್ಲುಳಿಯುವ ನಿನಪಿನ ಕಾಣಿಕೆಯನ್ನು ಡಿಸೈನರ್ ಸಂತೋಷ್ ಮೂಲಕ ಕ್ರಿಯೇಟ್ ಮಾಡಿಸಿ ಕಲಾವಿದರಿಗೆ ನೀಡುವಂತಾಗಲಿ ಎಂದು ಕನ್ನಡ ಪಿಚ್ಚರ್ ಹಾರೈಸುತ್ತದೆ.
****