ನಟ ಅಜಯ್ ರಾವ್ ಹಾಗೂ ರಚಿತ ರಾಮ್ ನಟನೆಯ ‘ಲವ್ ಯ್ಯೂ ರಚ್ಚು’ ಚಿತ್ರೀಕರಣದ ವೇಳೆ ವಿದ್ಯುತ್ ಅವಘಡ ಸಂಭವಿಸಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ನಟ ಅಜಯ್ ರಾವ್‌ಗೆ ಬಂಧನ ಭೀತಿ ಶುರುವಾಗಿದೆ. ಹೀಗಾಗಿ ನಟ ಅಜಯ್ ರಾವ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣ ಸಂಬಂಧ ದಾಖಲಾದ ಎಫ್‌ಐಆರ್‌ನಲ್ಲಿ ಅಜಯ್ ರಾವ್ ಹೆಸರನ್ನು ಇತರೆ ಆರೋಪಿಗಳು ಎಂದು ನಮೂದಿಸಲಾಗಿರುವುದರಿಂದ ನಿರೀಕ್ಷಣಾ ಜಾಮೀನಿಗೆ ಅಜಯ್ ರಾವ್ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ರಾಮನಗರ 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಅಜಯ್ ರಾವ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆಗಸ್ಟ್ 26 ರಂದು ಅಜಯ್ ರಾವ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ವಿಚಾರಣೆಗೆ ಹಾಜರಾದ ನಟಿ ರಚಿತ ರಾಮ್:
ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಚಿತಾ ರಾಮ್ ಇಂದು ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ರಾಮನಗರ ಡಿವೈಎಸ್ಪಿ ಮೋಹನ್ ಕುಮಾರ್ ಅರ್ಧ ಗಂಟೆ ಕಾಲ ವಿಚಾರಣೆ ನಡೆಸಿ ನಟಿಯಿಂದ ಹೇಳಿಕೆಯನ್ನು ದಾಖಲಿಸಿಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಚಿತಾ ರಾಮ್, ಘಟನೆ ನಡೆದಾಗ ನಾನು ಸ್ಥಳದಲ್ಲಿ ಇರಲಿಲ್ಲ. ಈ ಬಗ್ಗೆ ಮಾಧ್ಯಮ, ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ತಿಳಿಯಿತು. ಈ ಕುರಿತು ಪೊಲೀಸರಿಗೆ ವಿವರಣೆ ನೀಡಿರುವುದಾಗಿ ತಿಳಿಸಿದರು. ಘಟನೆ ಹೇಗಾಯಿತು ಎಂಬುದರ ಬಗ್ಗೆ ಗೊತ್ತಿಲ್ಲ. ಸಾಹಸ ದೃಶ್ಯಗಳಲ್ಲಿ ನಟಿಯರಿಗೆ ಹೆಚ್ಚು ಕೆಲಸ ಇರುವುದಿಲ್ಲ. ಹೀಗಾಗಿ ಅಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ನನ್ನಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ಈ ಮಧ್ಯೆ ಪ್ರಕರಣದಲ್ಲಿ ನಿರ್ದೇಶಕ ಶಂಕರಯ್ಯ, ಫೈಟ್ ಮಾಸ್ಟರ್ ವಿನೋದ್ ಕುಮಾರ್ ಮತ್ತು ಕ್ರೇನ್ ಚಾಲಕ ಮಹದೇವ್ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.
****