ಹೌದು ಜೋಗಿ ತ್ತನ್ನ ಜಾತ್ರೆ ಪ್ರಾರಂಭಿಸಿ ಇಂದಿಗೆ 16 ವರ್ಷ ಪೂರೈಸಿದೆ. 2005 ಆಗಸ್ಟ್ 19 ರಂದು ಬಿಡುಗಡೆಯಾದ ಜೋಗಿ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸಿನಿಮಾ ಬಿಡುಗಡೆಗೂ ಮುನ್ನವೇ ಹಾಡುಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು, ಯಾವ ಆಟೋ ಗಳಲ್ಲಿ , ಕ್ಯಾಬ್ ಗಳಲ್ಲಿ, ಗಣಪತಿ ಹಬ್ಬಗಳಲ್ಲಿ ಎಲ್ಲೆಂದರಲ್ಲಿ ಜೋಗಿ ಹಾಡುಗಳದ್ದೇ ಹವಾ ಸೃಷ್ಟಿಯಾಗಿತ್ತು. ಕರಿಯ, ಎಕ್ಸ್ಕ್ಯೂಸ್ಮೀ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರೇಮ್ ಅವರ ಚಿತ್ರ ಎಂಬ ಕಾರಣಕ್ಕೂ ‘ಜೋಗಿ’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿತ್ತು. ಆ 19 ರಂದು ಅದ್ದೂರಿಯಾಗಿ ಚಿತ್ರ ತೆರೆಕಂಡಿತು. ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನೂ ಮೀರಿ ಆ ಚಿತ್ರ ಯಶಸ್ಸು ಕಂಡಿತು. ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆಯಿತು. ಆಗ ಜನರ ಕ್ರೇಜ್ ಯಾವ ಮಟ್ಟಿಗೆ ಇತ್ತು ಎಂದರೆ, ಅದನ್ನು ‘ಜೋಗಿ ಜಾತ್ರೆ’ ಎಂದೇ ಕರೆಯಲಾಗುತ್ತಿತ್ತು.

ದಾಖಲೆ ನಿರ್ಮಿಸಿದ ಜೋಗಿ ಸಿನಿಮಾಕ್ಕೆ 16 ನೇ ವರ್ಷ
ಇಂದು 16 ವರ್ಷದ ತುಂಬಿದ ಸಂತಸವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ನೆಚ್ಚಿನ ಹೀರೋ ನಟನೆಯ ಸೂಪರ್ ಹಿಟ್ ಸಿನಿಮಾ, ಅನೇಕ ದಾಖಲೆಗಳನ್ನು ಮಾಡಿದ ಸಿನಿಮಾಗೆ 16 ವರ್ಷ ತುಂಬಿದ ಖುಷಿಯನ್ನು ಜಾತ್ರೆಯಂತೆ ಆಚರಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಜೋಗಿ ಸಂಭ್ರಮ ಜೋರಾಗಿದೆ.
ಶಿವರಾಜ್ಕುಮಾರ್ ಅವರ ವೃತ್ತಿಜೀವನದ ಅತಿ ಮುಖ್ಯ ಸಿನಿಮಾಗಳಲ್ಲಿ ‘ಜೋಗಿ’ ಚಿತ್ರಕ್ಕೆ ಪ್ರಮುಖ ಸ್ಥಾನವಿದೆ. ಈ ಚಿತ್ರದಲ್ಲಿ ಅರುಂಧತಿ ನಾಗ್ ನಟನೆಯನ್ನು ಎಂದಿಗೂ ಮರೆಯುವಂತಿಲ್ಲ. ಮಗನನ್ನು ಕಳೆದುಕೊಂಡು ಬೆಂಗಳೂರು ನಗರದಲ್ಲಿ ಅಲೆಯುವ ಅಮ್ಮನ ಪಾತ್ರದಲ್ಲಿ ಅವರು ವೀಕ್ಷಕರ ಕಣ್ಣುಗಳು ತೇವ ಆಗುವಂತೆ ನಟಿಸಿದ್ದರು. ಈ ಸಿನಿಮಾ ನೋಡಿ ಸ್ವತಃ ಡಾ. ರಾಜ್ಕುಮಾರ್ ಮೆಚ್ಚಿಕೊಂಡಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಈ ಚಿತ್ರ ಸಖತ್ ಇಷ್ಟವಾಗಿತ್ತು. ಕೆಲವು ವರ್ಷಗಳ ಬಳಿಕ ಕಿರುತೆರೆಯಲ್ಲಿ ಮೊದಲ ಬಾರಿಗೆ ಪ್ರಸಾರವಾದಾಗಲೂ ‘ಜೋಗಿ’ ಸಖತ್ ಸೌಂಡು ಮಾಡಿತ್ತು.
****