ಕನ್ನಡದ ಚಿತ್ರರಂಗ ದ ಹಿರಿಯ ಕಲಾವಿದೆ , ನಟಿ ಲೀಲಾವತಿ ಅವರನ್ನು ನೋಡಲು ಸುಧಾರಾಣಿ, ಶೃತಿ, ಮತ್ತು ಮಾಳವಿಕ ಲೀಲಾವತಿ ಅವರ ಮನೆಗೆ ಬೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಲೀಲಾವತಿ ಅವರ ಜೊತೆ ಈ ಮೂವರು ನಟಿಯರು ಕೆಲ ಸಮಯ ಇದ್ದು ಮಾತು ಕತೆ ನಡೆಸಿದ್ದಾರೆ.

ಹಿರಿಯ ಕಲಾವಿದೆ ಲೀಲಾವತಿ ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿ ತಮ್ಮ ತೋಟದ ಮನೆಯಲ್ಲಿ ಕಾಲು ಜಾರಿ ಸೊಂಟದ ಮೂಳೆಗೆ ಗಾಯ ಮಾಡಿಕೊಂಡಿದ್ದರು. ಸ್ನಾನ ಗೃಹದಲ್ಲಿ ಜಾರಿಬಿದ್ದು ನಟಿ ಲೀಲಾವತಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮಗ ವಿನೋದ್ ರಾಜ್ ನೆಲಮಂಗಲ ಟೌನ್ ಖಾಸಗಿ ಆಸ್ಪತ್ರೆಲ್ಲಿ ಚಿಕಿತ್ಸೆ ಕೊಡಿಸಿದ್ದರು.ಚಿಕಿತ್ಸೆ ನೀಡಿದ ವೈದ್ಯರು ನಟಿ ಲೀಲಾವತಿ ಯವರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದರು.

ಈ ಘಟನೆ ನಡೆದ ಬಗ್ಗೆ ಲೀಲಾವತಿ ಅವರ ಮಗ ವಿನೋದ್ ರಾಜ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದರು ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದ ಅಮ್ಮನಿಗೆ ನೋವು ತಡೆಯಲಾಗುತ್ತಿರಲಿಲ್ಲ, ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದ್ದು ಚಿಕಿತ್ಸೆ ಕೊಡಿಸಿದ್ದು. ಅಮ್ಮನನ್ನು ಪರೀಕ್ಷಿಸಿದ ವೈದ್ಯರು ದೊಡ್ಡ ಅಪಾಯವೇನು ಇಲ್ಲ. ಆದರೆ ಬೆನ್ನಿನ ಮೂಳೆಗೆ ಸಣ್ಣ ಗಾಯವಾಗಿದೆ ಎಂದು ತಿಳಿಸಿದ್ದಾರೆ. ಬೆನ್ನಿಗೆ ಬೆಂಬಲವಾಗಿ ಪಟ್ಟಿ ನೀಡಿದ್ದಾರೆ ಎಂದು ವಿನೋದ್ ತಿಳಿಸಿದರು. ಮನೆಯಲ್ಲೇ ಒಂದು ತಿಂಗಳ ಕಾಲ ಚಿಕಿತ್ಸೆ ಜೊತೆಗೆ ವಿಶ್ರಾಂತಿಗೆ ವೈದ್ಯರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದರು.
ಲೀಲಾವತಿ ಅವರು ಅನಾರೋಗ್ಯದ ವಿಚಾರ ತಿಳಿದ ತಕ್ಷಣ ಹಿರಿಯ ನಟಿಯರು ಮನೆಗೆ ತೆರಳಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ನಟಿ ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದು, ಲೀಲಾವತಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ.

“ಲೀಲಾವತಿ ಅಮ್ಮ, ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ ಇವರು. ನೂರಾರು ಸಿನಿಮಾಗಳಲ್ಲಿ ಬೇರೆ ಬೇರೆ ರೀತಿಯ ಪಾತ್ರಗಳ ಮೂಲಕ ನಮ್ಮೆಲ್ಲರನ್ನು ರಂಜಿಸಿದ್ದಾರೆ. ಲೀಲಾವತಿ ಎನ್ನುವುದು ದುರ್ಗಾದೇವಿಯ ಮತ್ತೊಂದು ಹೆಸರು, ಕನ್ನಡದಲ್ಲಿ ಲೀಲಾ ಎನ್ನುವ ಪದಕ್ಕೆ ಮತ್ತೊಂದು ಅರ್ಥ ವಿನೋದ. ಲೀಲಾವತಿ ಅಮ್ಮ ದುರ್ಗೆಯ ಅವತಾರವಾದರು, ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇಂದು ಎಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾರೆ” ಎಂದು ಸುಧಾರಾಣಿ ಬರೆದುಕೊಂಡಿದ್ದಾರೆ. “ಅವರು ವಾಸವಿರುವ ಊರಿನಲ್ಲಿ ಬಡಜನರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ, ಹಸು ಕರುಗಳಿಗೆ ನೀರಿನ ಟ್ಯಾಂಕ್ ಕಟ್ಟಿಸಿ ಅವುಗಳಿಗೆ ಮೇವು ನೀಡಿದ್ದಾರೆ, ಎಷ್ಟೋ ಜನರಿಗೆ ಊಟ ನೀಡಿ ಸಹಾಯ ಮಾಡುತ್ತಾ ಇರುವ ಇವರನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎಂದು ಕರೆಯುವುದೋ ಅಥವಾ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನು ಭೂಮಿ ತಾಯಿಯ ಹಾಗೆ ತನ್ನಲ್ಲಿಯೇ ಹೊತ್ತು, ತಾಳ್ಮೆಯಿಂದ ಎಲ್ಲವನ್ನು ಸಹಿಸಿ, ಲೀಲಾಜಾಲವಾಗಿ ನಿಭಾಯಿಸಿರವ ಇವರನ್ನು ಭೂಮಿ ತಾಯಿಯ ಸ್ವರೂಪ ಎಂದು ಕರೆಯುವುದೋ. ಇಂತಹ ವ್ಯಕ್ತಿತ್ವ ಹೊಂದಿರುವ ಲೀಲಾವತಿ ಅಮ್ಮನವರ ಜೊತೆ ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತ್ತು” ಎಂದು ಸುಧಾರಾಣಿ ಹೇಳಿದ್ದಾರೆ. “ನಾಯಕಿಯಾದ ಮೇಲು ಲೀಲಾವತಿ ಅಮ್ಮನವರ ಜೊತೆ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ. ಇಲ್ಲಿರುವ ಎರಡು ಫೋಟೋಗಳಲ್ಲಿ ಮೊದಲನೆಯದು ನಾನು ಬಾಲನಟಿಯಾಗಿ ನಟಿಸಿದ ಮೊದಲ ಸಿನಿಮಾ “ಕಿಲಾಡಿ ಕಿಟ್ಟು” ಚಿತ್ರೀಕರಣದ ಸಮಯದ ಫೋಟೋ ಮತ್ತೊಂದು ಇಂದು ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ..ವರ್ಷಗಳು ಉರುಳಿವೆ ಹೊರತು ನಮ್ಮ ನಡುವೆ ಇರುವ ಬಾಂಧವ್ಯವಲ್ಲ” ಎಂದು ಬರೆದುಕೊಂಡಿದ್ದಾರೆ.