‘100’ ಸೈಬರ್ ಕ್ರೈಮ್ , ಫ್ಯಾಮಿಲಿ ಥ್ರಿಲ್ಲರ್ ಕಥೆ ಹೇಳುವ ಸಿನಿಮಾ Ramesh Arvind

ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆಗೆ ಒಳಗಾಗುವ ಮಧ್ಯಮ ವರ್ಗದ ಕುಟುಂಬದ ಹೋರಾಟವೇ ‘100’ ಸಿನಿಮಾದ ಸಾರಾ ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಹೇಳಿದರು. ರಮೇಶ್ ಅರವಿಂದ್ ನಟಿಸಿ ನಿರ್ದೇಶಿಸಿರುವ ‘100’ ಚಲನಚಿತ್ರ ನವೆಂಬರ್ 19ರಂದು ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಅರವಿಂದ್ ಚಿತ್ರದ ಕುರಿತು ಮಾತನಾಡಿ, ಕುತೂಹಲಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ತಂತ್ರಜ್ಞಾನ ಹೆಚ್ಚಿದಂತೆಯೇ ಸೈಬರ್ ಕ್ರೈಂಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಮೊಬೈಲ್ ಕೈಗೆ ಬಂದ ನಂತರ ಪ್ರತಿಯೊಬ್ಬರೂ ಬೇರೆ ಬೇರೆ ಲೋಕದಲ್ಲಿ ಇದ್ದಂತೆ ಭಾಸವಾಗುತ್ತಿದೆ. ವ್ಯಕ್ತಿ ವ್ಯಕ್ತಿಗಳ ನಡುವೆ ಗೋಡೆ ನಿರ್ಮಿಸಿದಂತಾಗಿದೆ. ಇಂತಹ ಲೋಕದಲ್ಲಿ ಸೈಬರ್ ವಂಚನೆಗಳೂ ಹೆಚ್ಚಳವಾಗಿವೆ. ಸಾಮಾಜಿಕ ಜಾಲತಾಣದಿಂದ ವಂಚನೆಗೆ ಒಳಗಾದ ಮಧ್ಯಮ ವರ್ಗದ ಹೋರಾಟದ ರೂಪವಾಗಿ 100 ಚಿತ್ರ ಹೊರಹೊಮ್ಮಿದೆ. ಆ್ಯಕ್ಷನ್, ಥ್ರಿಲ್ಲರ್ ಸಿನೆಮಾ ಇದಾಗಿದ್ದು, ಕುಟುಂಬ ಸಮೇತರಾಗಿ ನೋಡುವಂತಹ ಸಿನೆಮಾ ‘100’ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ.
ಒಟ್ಟು ಸಿನಿಮಾದಲ್ಲಿ 4 ಹಾಡುಗಳಿವೆ. ಶ್ರೀರಂಗಪಟ್ಟಣ ಸೇರಿದಂತೆ ಬೆಂಗಳೂರಿನಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಅವರ ಕೆಜಿಎಫ್ ಸಿನಿಮಾ ಸಂಗೀತ ನೋಡಿ ಬಹಳ ಖುಷಿಯಾಗಿತ್ತು. ಹಾಗಾಗಿ ಅವರೆ ನಮ್ಮ ಚಿತ್ರಕ್ಕೆ ಸರಿಯಾದ ಆಯ್ಕೆ ಅಂದುಕೊಂಡೆ. ಅದ್ಭುತವಾದ ಸಂಗೀತವನ್ನ ನಮ್ಮ ಚಿತ್ರಕ್ಕೆ ಅವರು ನೀಡಿದ್ದಾರೆ. ಸೋಶಿಯಲ್ ಮೀಡಿಯಾ ಬಗ್ಗೆ ಇರುವ ಕತೆ ಇದು. ಮೊಬೈಲ್ ನಿಂದ ಏನೆಲ್ಲ ನಡೆಯುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಮೊಬೈಲ್ ನಿಂದ ಒದ್ದಾಡುವ ಒಂದು ಕುಟುಂಬದ ಕತೆ ಇದು. ಇನ್ಸ್ಪೆಕ್ಟರ್ ವಿಷ್ಣು ಎನ್ನುವ ಪಾತ್ರವನ್ನ ನಾನು ಮಾಡಿದ್ದೇನೆ. ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಕತೆ ಎಲ್ಲರನ್ನು ಹಿಡಿದಿಡಲಿದೆ ಎನ್ನುವ ನಂಬಿಕೆ ನಮಗಿದೆ ಎಂದು ರಮೇಶ್ ಅರವಿಂದ್ ಹೇಳಿದ್ದಾರೆ. ಈ ಚಿತ್ರದ ಬಳಿಕ ಇನ್ನೊಂದು ಚಿತ್ರವನ್ನು ಕನ್ನಡ, ತೆಲುಗಿನಲ್ಲಿ ಮಾಡಲಿದ್ದೇನೆ, ಸದ್ಯಕ್ಕೆ ಶಿವಾಜಿ ಸೂರತ್ಕಲ್ 2 ಮಾಡುತ್ತಿದ್ದೇನೆ, 2005 ರಲ್ಲಿ ತೆರೆಕಂಡು ಯಶಸ್ವೀಯಾದ “ರಾಮ ಶಾಮ ಬಾಮ” ಚಿತ್ರ ಭಾಗ- 2” ಮಾಡುವ ಯೋಜನೆಯೂ ಇದೆ ಎಂದರು.
****