News

ಸೆನ್ಸಾರ್ ಮುಗಿಸಿ ರಿಲೀಸ್ ಗೆ ರೆಡಿಯಾದ ‘ಮದಗಜ’

ಸೆನ್ಸಾರ್ ಮುಗಿಸಿ ರಿಲೀಸ್ ಗೆ ರೆಡಿಯಾದ ‘ಮದಗಜ’
  • PublishedNovember 28, 2021

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಹಾಗೂ ಮಹೇಶ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಮದಗಜ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅಲ್ಲದೇ ಚಿತ್ರತಂಡ ಚಿತ್ರವನ್ನು ಡಿಸೆಂಬರ್  3ರಂದು ಬಿಡುಗಡೆ ಮಾಡುತ್ತೇವೆ ಎಂದು ಅನೌನ್ಸ್ ಕೂಡಾ ಮಾಡಿದ್ದರು. ಇದೀಗ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಯು/ಎ ಪ್ರಮಾಣ ಪತ್ರ’ ಸಿಕ್ಕಿದೆ. ಹೌದು! ಸೆನ್ಸಾರ್ ಮಂಡಳಿಯವರು ಚಿತ್ರವನ್ನು ವೀಕ್ಷಿಸಿ ಚಿತ್ರದ ಬಗ್ಗೆ ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸಿ ‘ಯು/ಎ ಪ್ರಮಾಣ ಪತ್ರ’ವನ್ನು ನೀಡಿದ್ದಾರೆ.

ಇತ್ತೀಚೆಗೆ ‘ಮದಗಜ’ ಚಿತ್ರದ ಟ್ರೇಲರ್ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಸಖತ್ ಧೂಳೆಬ್ಬಿಸಿತ್ತು. ಟ್ರೇಲರ್ ನೋಡಿದ ಸಿನಿರಸಿಕರು ‘ಮದಗಜ’ನಿಗೆ ಬಹುಪರಾಕ್ ಎಂದಿದ್ದರು. ಅಲ್ಲದೇ ಟ್ರೇಲರ್‌ನಲ್ಲಿ ಅತಿ ಹೆಚ್ಚು ಆ್ಯಕ್ಷನ್ ದೃಶ್ಯಗಳಿದ್ದು, ಬೃಹತ್​ ಸೆಟ್‌ಗಳು​ ಮತ್ತು ಅದ್ಧೂರಿ ಮೇಕಿಂಗ್‌ ಎದ್ದು ಕಾಣುತ್ತಿತ್ತು. ಜೊತೆಗೆ ಚಿತ್ರದ ಟೈಟಲ್ ಟ್ರ್ಯಾಕ್ ಹಾಗೂ ಟೈಟಲ್ ಟ್ರ್ಯಾಕ್ ಮೇಕಿಂಗ್ ವಿಡಿಯೋ ಕೂಡಾ ಬಿಡುಗಡೆಯಾಗಿ, ಶ್ರೀಮುರಳಿ ಮಾಸ್‌ ಲುಕ್‌ನಲ್ಲಿ ಅಬ್ಬರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. 

ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ, ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್‌ನ್ನು ಬಾಲಿವುಡ್ ಪ್ರತಿಷ್ಠಿತ ಸಂಸ್ಥೆಯೊಂದು 8 ಕೋಟಿಗೆ ಖರೀದಿಸಿದೆ ಎನ್ನಲಾಗಿದ್ದು, ತಮಿಳು ಮತ್ತು ತೆಲುಗು ಡಬ್ಬಿಂಗ್ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿದೆ ಎಂದು ಕಾದು ನೋಡಬೇಕಿದೆ. ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ದೇಶದಾದ್ಯಂತ 1400 ಚಿತ್ರಮಂದಿರಗಳಲ್ಲಿ ‘ಮದಗಜ’ ಸಿನಿಮಾ ಬಿಡುಗಡೆಯಾಗುತ್ತಿದೆ. ವಿಶೇಷವಾಗಿ ಚಿತ್ರದ ಟ್ರೇಲರ್‌ನ್ನು ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿ, ಶ್ರೀಮುರಳಿಗೆ ಆಲ್ ದಿ ಬೆಸ್ಟ್ ಹೇಳಿದರು. ಟ್ರೇಲರ್ ಇಷ್ಟು ಅದ್ಭುತವಾಗಿದೆ ಅಂದರೆ ಸಿನಿಮಾನೂ ಚೆನ್ನಾಗಿರುತ್ತೆ. ಶ್ರೀಮುರಳಿ ಹಾಲಿವುಡ್ ಹೀರೋ ಆಗಿದ್ದಾರೆ. ಒಬ್ಬ ವ್ಯಕ್ತಿಗೆ ವಯಸ್ಸು ಮುಖ್ಯವಲ್ಲ, ಸಾಧನೆ ಮುಖ್ಯ ಎಂದು ಹೇಳಿದ್ದರು. 

‘ಕ್ರೌರ್ಯದಲ್ಲಿ ಶಾಂತಿ ಇಷ್ಟ, ದ್ವೇಷದಲ್ಲಿ ತಾಳ್ಮೆನೇ ಇಷ್ಟ’ ಎನ್ನುವ ಡೈಲಾಗ್ ಟ್ರೇಲರ್​ನ ಆರಂಭದಲ್ಲೇ ಬರುತ್ತದೆ. ಹುಲಿನಾ ಬೇಟೆ ಆಡಬೇಕು, ನರಿನಲ್ಲ. ಊಟದಲ್ಲಿ ಎಲೆಗಳನ್ನ ಲೆಕ್ಕ ಹಾಕಬಾರದು, ಸಾವಿನಲ್ಲಿ ತಲೆಗಳನ್ನ ಲೆಕ್ಕ ಹಾಕಬಾರದು. ಭಕ್ತಿ ಕೋಡೋನು ಆ ಶಿವ, ನರಕ ತರ್ಸೋನು ಈ ತಾಂಡವ. ಭಯ ಬಿದ್ದರೆ ದೀಪಕ್ಕೆ ಬತ್ತಿನೂ ಹಾಕೊಕ್ಕಾಗಲ್ಲ, ಧೈರ್ಯ ಇದ್ರೆ… ಇವೆಲ್ಲಾ ‘ಮದಗಜ’ ಚಿತ್ರದ ಟ್ರೇಲರ್‌ನಲ್ಲಿ ಬರುವ ಪವರ್‌ಫುಲ್ ಡೈಲಾಗ್‌ಗಳು. ಟ್ರೇಲರ್‌ನಲ್ಲಿ ಕೆಲ ದೃಶ್ಯಗಳು ಮೈ ಜುಮ್​ ಎನಿಸುವಂತಿದ್ದು, ಮಚ್ಚು- ಲಾಂಗುಗಳು ಝಳಪಿಸಿವೆ. ಚಿತ್ರದಲ್ಲಿ ವಾರಾಣಸಿ ಗ್ಯಾಂಗ್‌ಸ್ಟರ್‌ ಆಗಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ.

ಮೊದಲ ಬಾರಿಗೆ ಶ್ರೀಮುರಳಿ ಎದುರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು, ಚಿತ್ರದಲ್ಲಿ ಅವರು ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಚಿತ್ರಕ್ಕೆ  ಬಂಡವಾಳ ಹೂಡಿದ್ದು, ‘ಮಫ್ತಿ’ ಖ್ಯಾತಿಯ ನವೀನ್‌ ಕುಮಾರ್‌ ಚಿತ್ರಕ್ಕೆ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಹರೀಶ್ ಕೊಮ್ಮೆಯವರ ಸಂಕಲನವಿರುವ ಈ ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದ್ದು, ‘ಕೆಜಿಎಫ್‌’ ಖ್ಯಾತಿಯ ರವಿ ಬಸ್ರೂರ್‌ ಸಂಗೀತ ಸಂಯೋಜನೆಯಿದೆ.

****

Written By
Kannadapichhar

Leave a Reply

Your email address will not be published. Required fields are marked *