ಸಲಗ ಮತ್ತು ಕೋಟಿಗೊಬ್ಬ 3 ಗೆ ಅದ್ದೂರಿ ಸ್ವಾಗತ..! ಸ್ಯಾಂಡಲ್ ವುಡ್ ನಲ್ಲಿ ಮನೆ ಮಾಡಿದ ಸಂಭ್ರಮ..!

ಇಂದಿನಿಂದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಮತ್ತು ದುನಿಯಾ ವಿಜಯ್ ಅವರ ಸಲಗ ಸಿನಿಮಾ ತೆರೆಗೆ ಬರುತ್ತಿದೆ. ಇದು ಚಿತ್ರರಂಗದ ಪಾಲಿಗೆ ಹೊಸ ಆಶಾಕಿರಣವಾಗಿದೆ. ಈ ನಡುವೆ ಕೋಟಿಗೊಬ್ಬ 3 ಪ್ರದರ್ಶನಕ್ಕೆ ಮೊದಲ ಶೋಗೆ ತೊಂದರೆಯಾದರೂ ನಂತರದ ಶೋಗಳು ಪ್ರದರ್ಶನವಾಗುವ ನಿರೀಕ್ಷೆಯಿದೆ.
ದಸರಾ ಪ್ರಯುಕ್ತ ಸಾಲು ಸಾಲು ರಜೆ ಇರುವುದರಿಂದ ಪ್ರೇಕ್ಷಕರು ಥಿಯೇಟರ್ ಗೆ ಬರುತ್ತಾರೆ ಎನ್ನುವುದು ನಿರ್ಮಾಪಕರ, ಥಿಯೇಟರ್ ಮಾಲಿಕರ ಲೆಕ್ಕಾಚಾರ. ಕೋಟಿಗೊಬ್ಬ 3 ರಾಜ್ಯಾದ್ಯಂತ 350 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆ ಕಾಣುತ್ತಿದ್ದು, ಸಲಗ ಕೂಡಾ 300 ಪ್ಲಸ್ ಥಿಯೇಟರ್ ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇವೆರಡೂ ಹಿಟ್ ಆಗಿ ಚಿತ್ರರಂಗಕ್ಕೆ ಹೊಸ ಭರವಸೆ ಸಿಗಲಿ ಎನ್ನುವುದು ಸಿನಿ ಪ್ರಿಯರ ಹಾರೈಕೆ.
ಈ ದಿನದ ಸಂಭ್ರಮಕ್ಕಾಗಿ ಕಾಯುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಸಿನಿ ಪ್ರೇಮಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ, ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಸುದೀಪ್, ದುನಿಯಾ ವಿಜಯ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕಟೌಟ್‌ಗಳನ್ನು ನಿಲ್ಲಿಸಿ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ಕೊರೊನಾ ಎರಡನೇ ಅಲೆಯ ಬಳಿಕ ನಂತರ ಜನ ಚಿತ್ರಮಂದಿರಗಳಿಗೆ ಬರುತ್ತಾರೊ ಇಲ್ಲವೊ ಎಂಬ ಆತಂದಲ್ಲಿದ್ದ ನಿರ್ಮಾಪಕರ ಆತಂಕ ಮಂಜಿನಂತೆ ಕರಗಿದೆ. ಬೆಂಗಳೂರಿನ ಬಹುತೇಕ ಎಲ್ಲ ಚಿತ್ರಮಂದಿಗಳ ಮುಂದೆಯೂ ಜನ ಜಾತ್ರೆಯೇ ನಡೆದಿದೆ. ದಸರ ಹಬ್ಬದೊಂದಿಗೆ ಸಿನಿಮಾ ಹಬ್ಬವೂ ನಡೆದಿದೆ.
****