‘ರೈಡರ್’ ಚಿತ್ರದ ನಟಿ ‘ಅನುಷಾ ರೈ’ಗೆ ಕಾಟ ಕೊಡುತ್ತಿದ್ದ ಮಾಜಿ ಪ್ರಿಯಕರ ಅರೆಸ್ಟ್..!

ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾದಲ್ಲಿ ನಟಿಸಿರುವ ನಟಿ ಅನುಷಾ ರೈ ಮೇಲೆ ಹಲ್ಲೆ ಮಾಡಿ, ಅವಾಚ್ಯಶಬ್ದಗಳಿಂದ ನಿಂದಿಸಿರೋ ಆರೋಪ ಮೇಲೆ ಚಂದನ್ ಪ್ರಸಾದ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ನಟಿ ಅನುಷಾ ರೈ ಅವರು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಠಾಣೆಗೆ ದೂರು ನೀಡಿದ್ದರು. ಅಕ್ಟೋಬರ್ 19ರಂದು ನಡೆದ ಘಟನೆಯಲ್ಲಿ ಚಂದನ್ ಪ್ರಸಾದ್ ಅವರು ನಟಿಯ ಮೇಲೆ ಹಲ್ಲೆ ಮಾಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. 2015ರಲ್ಲಿ ಚಂದನ್ ಪ್ರಸಾದ್ ಮತ್ತು ಅನುಷಾ ರೈ ಪ್ರೀತಿಸುತ್ತಿದ್ದರಂತೆ. ಎರಡು ತಿಂಗಳ ಪ್ರೀತಿಯ ನಂತರ ಇಬ್ಬರಿಗೂ ಬ್ರೇಕ್ ಅಪ್ ಆಗಿತ್ತಂತೆ. ಆಗಿನಿಂದ ನಟಿ ಅನುಷಾ ರೈ ಅವರಿಗೆ ಚಂದನ್ ಪ್ರಸಾದ್ ಹಿಂಸೆ ಕೊಡುತ್ತಿದ್ದರಂತೆ.

2015ರಲ್ಲಿ ಆಚಾರ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದ ಚಂದನ್ ಪ್ರಸಾದ್ ಹಾಗೂ ನಟಿ ಅನುಷಾ ರೈ ಅವರ ನಡುವೆ ಪರಿಚಯವಾಗಿ, ಅದು ಪ್ರೀತಿಯಾಗಿ ಬದಲಾಗಿತ್ತಂತೆ. ಆದರೆ ಈ ಪ್ರೀತಿ ಎರಡೇ ತಿಂಗಳಿನಲ್ಲಿ ಮುರಿದು ಬಿದ್ದಿತ್ತು. ದೂರವಾದ ಬಳಿಕ ಆರೋಪಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಇದೇ ತಿಂಗಳ 19ರಂದು ಸ್ನೇಹಿತೆಯ ಜೊತೆಗೆ ಅನುಷಾ ರೈ ಆಟೋದಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದಿದ್ದ ಚಂದನ್ ಪ್ರಸಾದ್ ಆಟೋ ಒಳಗೆ ನುಗ್ಗಿ ಹಲ್ಲೆ ಮಾಡಿದ್ದರಂತೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಂತೆ. ಘಟನೆ ನಡೆದಾಗಲೇ ಪೊಲೀಸರಿಗೆ ದೂರು ನೀಡುವುದಾಗಿ ನಟಿ ಹೇಳುತ್ತಿದ್ದಂತೆಯೇ ಅಲ್ಲಿಂದ ಎಸ್ಕೇಪ್ ಆಗಿದ್ದನಂತೆ ಚಂದನ್ ಪ್ರಸಾದ್. ಬಳಿಕ ನಟಿ ಅನುಷಾ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ಪೊಲೀಸರ ಅತಿಥಿಯಾಗಿರುವ ಚಂದನ್ ಪ್ರಸಾದ್ ಅವರು ದುಬೈನಲ್ಲಿ ಸಾಫ್ಟ್‌ವೇರ್ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದರಂತೆ. 2017ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಅವರು, ನೆಲಮಂಗಲದಲ್ಲಿ ಬಂದು ವಾಸವಿದ್ದರಂತೆ. ಇತ್ತೀಚೆಗೆ ನಟಿಯ ಮನೆಯ ವಿಳಾಸ ತಿಳಿದುಕೊಂಡು ಹಿಂಬಾಲಿಸಲು ಶುರು ಮಾಡಿದ್ದರಂತೆ.
****