ಭಾರತಾಂಬೆಯ ಮೈ-ಮನಸ್ಸಿನ ಗಾಯಕ್ಕೆ ಬಾಬಾಸಾಹೇಬರು ಹಚ್ಚಿದ ಮುಲಾಮು “ಜೈ ಭೀಮ್”

ಸಮಾಜದ ಅಂಚಿನಲ್ಲಿರುವ ಸಮುದಾಯವೊಂದರ ಧಾರುಣ ಸ್ಥಿತಿಯನ್ನು ಜೈಭೀಮ್ ಸಿನಿಮಾದಲ್ಲಿ ಯಾವುದೇ ಹೀರೊಯಿಸಂ ಇಲ್ಲದೆ ಉತ್ತಮವಾಗಿ ತೋರಿಸಿದ್ದಾರೆ ಟಿ.ಜೆ.ಜ್ಞಾನವೇಲ್. 1995 ರ ಆಸುಪಾಸಿನಲ್ಲಿ ನಡೆದ ನೈಜ ಘಟನೆಯಾಧರಿಸಿ ತಯಾರಾಗಿರುವ ಸಿನಿಮಾ ಜೈ ಭೀಮ್. ಇಲಿ, ಹಾವು ಹಿಡಿಯುವ ಇರುಳರ್ ಜನಾಂಗದ ಪರವಾಗಿ ಹೋರಾಡಿದ ಕೆ.ಚಂದು ಎಂಬ ನಿಜದ ಹೀರೊ ನ್ಯಾಯ ವದಗಿಸಿಕೊಟ್ಟ ಕಥೆಯನ್ನಿಟ್ಟುಕೊಂಡು ಸಿನಿಮಾ ತಯಾರಾಗಿದೆ ನವೆಂಬರ್ 2 ರಿಂದ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದ್ದು ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ.
ಬಡತನದಲ್ಲೂ ಪ್ರೀತಿಯ ಸಿರಿವಂತಿಕೆ ತುಂಬಿರುವ ಜೋಡಿಗಳು. ಅವರದೇ ಪ್ರಪಂಚದಲ್ಲಿ ಬದುಕುತ್ತಿರುತ್ತಾರೆ. ಹಾವು ಹಿಡಿಯಲು ಹೋದವನ ಮೇಲೆ ಕಳ್ಳತನದ ಆರೋಪ ಹೊರಿಸಿ ಬುಡಕಟ್ಟು ಜನರನ್ನು ಕ್ರಿಮಿನಲ್ ಗಳಾಗಿ ಮಾಡುವುದು, ಗಂಡಸರು ನಾವಿದ್ದೀವಿ ಹೆಂಗಸರನ್ನು ಮನೆಗೆ ಕಳಿಸಿ ಅಂದಾಗ ಹೆಣ್ಣಿನ ಬಟ್ಟೆ ಎಳೆದು ಬೆತ್ತಲೆಗೊಳಿಸಿ, ಹೀಗೆ ಶಿಕ್ಷಿಸುವುದು, ನಮ್ಮ ಅಧಿಕಾರ ಎನ್ನುವ ಮನೋಭಾವದವರು, ಬಂಧಿತ ಮೂವರಿಗೂ ಚನ್ನಾಗಿ ಹೊಡೆದು ಕಳ್ಳತನದ ಆರೋಪ ಹೊರಿಸಲು ಪ್ರಯತ್ನಿಸಿದಾಗ, ಒಂದು ಸಲ ಕಳ್ಳ ಅಂತ ಒಪ್ಪಿಕೊಂಡರೆ ಜೀವನ ಪೂರ್ತಿ ಕಳ್ಳರಾಗೆ ಇರ್ತೀವಿ ಮಾಡದ ತಪ್ಪನ್ನು ಯಾಕೆ ಒಪ್ಪಿಕೊಳ್ಳಬೇಕು? ಇದು ಅವರು ಬದುಕುವ ರೀತಿ. ಒಂದು ಬುಡಕಟ್ಟು ಹೆಣ್ಣನ್ನು ಹೈಕೋರ್ಟ್ ವರೆಗೂ ಬರುವ ಹಾಗೆ ಮಾಡಿದ್ದೀರಾ???? ಎಂಬ ಪ್ರಶ್ನೆಯು ಯೋಚಿಸುವಂತಿದೆ. ಸಂವಿಧಾನ ಬಂದು ಇಷ್ಟು ವರ್ಷಗಳಾದರೂ ಈ ಸಮಾಜದಲ್ಲಿರುವ ಜನರ ಮನೋಭಾವದಲ್ಲಿ ಬದಲಾವಣೆ ಆಗಲೇ ಇಲ್ಲ. ಮೂಲಭೂತ ಹಕ್ಕುಗಳಲ್ಲಿ ಒಂದಾದ ವಿಧಿ 32 ಸಂವಿಧಾನಾತ್ಮಕ ಪರಿಹಾರ ಹಕ್ಕು ಗಳು ಅದರಲ್ಲಿ ಮೊದಲನೆಯದು ಹೇಬಿಯಸ್ ಕಾರ್ಪಸ್ – ವ್ಯಕ್ತಿಯ ಸ್ವಾತಂತ್ರ್ಯ ರಕ್ಷಿಸಲು ಇರುವ ಮೂಲಭೂತ ಹಕ್ಕುಗಳಲ್ಲಿ ಒಂದು ಎಂಬುದನ್ನು ಸೂಕ್ಷ್ಮ ಒಳನೋಟಗಳ ಮುಖಾಂತರ ಸ್ಪಷ್ಟ ಪಡಿಸಿದೆ.
ಆ ಜಾತಿಯಲ್ಲಿ ಕಳ್ಳರು ಜಾಸ್ತಿ ಸರ್ ಅಂದಾಗ ಕಳ್ಳರಿಗೆ ಅಂತ ಒಂದು ಜಾತಿ ಇದ್ಯಾ? ನಮ್ಮ ಜಾತಿ ನಿಮ್ಮ ಜಾತಿ ಎಲ್ಲಾ ಜಾತಿಗಳಲ್ಲೂ ಇದ್ದಾರೆ. ಆಲೋಚನೆ ವಿಶಾಲವಾಗಿರಬೇಕು ಎಂಬುದರ ಸೂಕ್ಷ್ಮತೆ ಇದೆ. ವಕೀಲರ ಮನೆಯಲ್ಲಿ ಇದ್ದ ಬುದ್ಧನ ಪ್ರತಿಮೆ ಈ ದೇಶದ ಜನರಲ್ಲಿ ಕಮರಿ ಹೋಗಿರುವ ಮಾನವೀಯತೆ ಮತ್ತು ಅಂತಃಕರಣಗಳ ಪ್ರತೀಕವಾಗಿ ಕಾಣುತ್ತದೆ. ಅಲ್ಲಿನ ಫೋಟೋಗಳು ಕಾರ್ಲಮಾರ್ಕ್ಸ್, ಅಂಬೇಡ್ಕರ್, ಪೆರಿಯಾರ್ ಎಲ್ಲಾ ಜಾತಿ ಜನರ ಕಷ್ಟಗಳಿಗೆ ಮಿನುಗುವ ನಕ್ಷತ್ರಗಳಾಗಿ ಕಾಣುತ್ತದೆ. ಯೋಚನೆಗಳು ಬದಲಾಗಬೇಕು. ಹೇಳಿಕೇಳಿ, ಅಪ್ಲಿಕೇಶನ್ ಹಾಕಿ ಯಾರೂ ತಾನು ತನ್ನ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಹುಟ್ಟುವುದಿಲ್ಲ. ಆದರೆ ಕೆಲವರು ಇಂತಿಂಥ ಕೆಲಸಗಳು, ಆರೋಪಗಳು ಇಂಥ ಜಾತಿಗೆ ಸೇರಿದ್ದು ಎಂದು ಸರಾಗವಾಗಿ ನಿರ್ಧರಿಸಿ ಮಾಡಿಲ್ಲದ ತಪ್ಪಿಗೆ ತಪಿತಸ್ಥನ ಪಟ್ಟಕಟ್ಟಲು ಸಿದ್ದರಾಗಿರುತ್ತಾರೆ. ತಪ್ಪು ಮಾಡೋರಿಗೆ ಜಾತಿ, ಹಣ, ರಾಜಕೀಯ ಅಂತ ಸಾಕಷ್ಟು ಮಾರ್ಗಗಳಿದ್ದಾವೆ. ಆದರೆ ಬಡವರಿಗೆ???? ಇಲ್ವಲ್ಲ.
ಎಲ್ಲಾ ಮುಖ್ಯವಾದ ವ್ಯಕ್ತಿಗಳು ಇದ್ದಾರೆ ಆದ್ರೆ ಅಂಬೇಡ್ಕರ್ ಇಲ್ವಲ್ಲ ಅಂತ ಒಂದು ಶಾಲಾ ಸಮಾರಂಭದಲ್ಲಿ ಕೇಳುವ ಪ್ರಶ್ನೆಗೆ ಇಂದಿಗೂ ನಮ್ಮ ಭಾರತದಲ್ಲಿ ಉತ್ತರ ಸಿಗುವುದಿಲ್ಲ. ಮುಂದೆಯೂ ಸಿಗುತ್ತದೆಯೊ ಇಲ್ಲವೋ ಗೊತ್ತಿಲ್ಲ….. ಅಂಬೇಡ್ಕರ್ ಅಂದ್ರೆ ಅಪಥ್ಯದಂತೆ ಭಾವಿಸುವ ಜನರು ಇಂದು ಅವರು ನೀಡಿರುವ ಹಲವಾರು ಸವಲತ್ತುಗಳನ್ನು ಬಳಸಿಕೊಂಡು ಅವರ ಬಗ್ಗೆ ಕೇಳಿದರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಇನ್ನೂ ಈ ಪ್ರಶ್ನೆ ಪ್ರಶ್ನೆಯಾಗೆ ಉಳಿಯುವುದು ಎಂಬುದಕ್ಕೆ ಇದಕ್ಕಿಂತ ಬೇರೆ ಸಂಗತಿ ಬೇಕಾಗಿಲ್ಲ.
ಜಗತ್ತಿನಲ್ಲಿ ತುಂಬಾ ಮೋಸಗಾರ ಅಂದ್ರೆ ವಕೀಲರು, ಜಗತ್ತಿನಲ್ಲಿ ತುಂಬಾ ಮೋಸಗಾರ ಅಂದ್ರೆ ಪೋಲಿಸ್ ನವರು ಅಂತ ತಿಳಿದುಕೊಂಡಿರುವ ವ್ಯಕ್ತಿಗಳು ಇಬ್ಬರು ಸೇರಿಕೊಂಡು ಒಂದು ಕೇಸ್ ನಡ್ಸೋದಕ್ಕೆ ಹೊರಟಿದ್ದಾರೆ ಈ ಮಾತು ಹೇಳುವ ಪೋಲಿಸ್ ಕೊನೆಗೂ ನ್ಯಾಯದ ಪರ ನಿಲ್ಲುವುದು ಖುಷಿಯ ಸಂಗತಿ.
ಓಟಿನ ಹಕ್ಕು ಕೇಳಲು ಹೋದಾಗ ಈಗಲೇ ಕಂಡ ಕಂಡವರ ಕಾಲಿಗೆ ಬಿದ್ದು ಓಟು ಕೇಳ್ತಾ ಇದ್ದೀವಿ ಇನ್ನೂ ಈ ಕೇಳ ಜಾತಿಯವರ ಕಾಲಿಗೂ ಬೀಳಬೇಕಾ??? ಎಂದು ಹೇಳುವ ಮನುಷ್ಯನ ಜಾತಿಯ ಮನಸ್ಥಿತಿ ಇನ್ನೂ ಈ ಸಮಾಜ ಸುಧಾರಿಸಿಲ್ಲ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ.
ಚಪ್ಪಲಿಯೇ ಕಾಣದ ಪಾದಗಳು ಹವಾಯಿ ಚಪ್ಪಲಿ ಮೆಟ್ಟಿದಾಗ, ಸ್ಲೇಟು ಬಳಪ ಹಿಡಿಯದ ಕೈಗಳು ಅವುಗಳನ್ನು ಮುಟ್ಟಿದಾಗ, ಸೋಫಾ ಮೇಲೆ ಕುಳಿತು ಕಾಲಿನ ಮೇಲೆ ಕಾಲು ಹಾಕಿ ನ್ಯೂಸ್ ಪೇಪರ್ ಓದುವುದೆಂದರೆ ತಮಾಷೆಯ ಮಾತೆ???? ಆದರೆ ಇವೆಲ್ಲವೂ ಸಾಧ್ಯವಾಗಿದ್ದು ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಿಂದ.
ಒಬ್ಬ ಶಿಕ್ಷಕಿ, ಒಬ್ಬ ಲಾಯರ್, ಒಬ್ಬ ಪೋಲಿಸ್ ನ್ಯಾಯಕ್ಕಾಗಿ ದುಡಿದರೆ ಎಂಥಹ ಕೇಸೇ ಆಗಿರಲಿ ನಿರಪರಾಧಿಗೆ ನ್ಯಾಯ ಸಿಗುತ್ತದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಸೂರ್ಯ, ಪ್ರಕಾಶ್ ರೈ ಅವರ ಅಭಿನಯ ಫುಲ್ ಮಾರ್ಕ್ಸ್ ತಗೊಂಡಿದೆ. ತೆರೆಗೆ ಬೇಕಾಗಿರುವ ರೊಮ್ಯಾಂಟಿಕ್ ಅನ್ನುವ ಹೆಸರಿನ ಅಶ್ಲೀಲ ಪ್ರೇಮ ಕತೆ ಇಲ್ಲ. ಕುಣಿದು ಕುಪ್ಪಳಿಸಿ ಖುಷಿಗೊಳಿಸುವ ಹಾಡುಗಳು ಇಲ್ಲ. ಫೈಟಿಂಗ್ ಅಂತೂ ಮೊದಲೇ ಇಲ್ಲ. ಹೀಗಿದ್ದರೂ ಈ ಸಿನಿಮಾ ಗೆಲ್ಲುವುದು. ಏಕೆಂದರೆ ನೆಲಮೂಲ ಜನರ ಸಾಂಸ್ಕೃತಿಕ ಪ್ರತೀಕ ಮತ್ತು ಅವರ ಬದುಕಿನ ಸ್ತರಗಳ ಉಸಿರಾಟದ ಬಿಸಿಯುಸಿರಿದೆ.
ಕೊನೆಯ ಪ್ರಶ್ನೆ… ಕನ್ನಡದಲ್ಲೇಕೆ ಇಂತಹ ಚಲನಚಿತ್ರಗಳು ಬರುವುದಿಲ್ಲ????
(ಪವಿತ್ರ ಎನ್)