ಬಿಡುಗಡೆ ಗೆ ರೆಡಿಯಾದ ‘ಲಂಕೆ’: ಸಾಂಗ್ಸ್ ರಿಲೀಸ್ ಮಾಡಿದ ಚಿತ್ರ ತಂಡ

‘ಲೂಸ್ ಮಾದ’ ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ ಮುಂತಾದವರು ನಟಿಸಿರುವ ‘ಲಂಕೆ’ ಸಿನಿಮಾ ರಿಲೀಸ್‌ಗೆ ರೆಡಿ ಇದೆ. ಈ ಸಿನಿಮಾದ ಹಾಡುಗಳನ್ನು ಈಚೆಗೆ ನಟ ‘ಡಾಲಿ’ ಧನಂಜಯ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಹಾರೈಸಿದ್ದಾರೆ. ‘ಯೋಗಿ ನನ್ನ ಸ್ನೇಹಿತ. ಸ್ನೇಹಕ್ಕಾಗಿ ಇಲ್ಲಿಗೆ ಬಂದಿದ್ದೀನಿ. ನಾನು ಹಾಗೂ ಯೋಗಿ ‘ಹೆಡ್ ಬುಷ್’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದೇವೆ. ಹಾಡುಗಳು ನೋಡಿದೆ. ತುಂಬಾ ಚೆನ್ನಾಗಿದೆ. ಚಿತ್ರ ಕೂಡ ಅಷ್ಟೇ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ. ಸರ್ಕಾರ ಆದಷ್ಟು ಬೇಗ ಶೇ.100 ಆಸನ ಭರ್ತಿಗೆ ಅವಕಾಶ ನೀಡಲಿ. ಕೊರೊನಾ ಕಡಿಮೆಯಾಗಿ ಚಿತ್ರಮಂದಿರ ತುಂಬಿ ತುಳುಕುವ ದಿನಗಳು ಬೇಗ ಬರಲಿ’ ಎಂದು ‘ಡಾಲಿ’ಧನಂಜಯ ಹಾರೈಸಿದರು.

ನಂತರ ಮಾತನಾಡಿದ ಯೋಗಿ, ‘ಆಡಿಯೋ ರಿಲೀಸ್ ಮಾಡಿಕೊಟ್ಟ ಗೆಳೆಯ ಡಾಲಿ ಧನಂಜಯ ಅವರಿಗೆ ಧನ್ಯವಾದ. ನಾನು ಇಷ್ಠು ಚೆನ್ನಾಗಿ ನೃತ್ಯ ಮಾಡಲು ನೃತ್ಯ ನಿರ್ದೇಶಕ ಧನು ಅವರೇ ಕಾರಣ. ಕಾರ್ತಿಕ್ ಶರ್ಮರ ಸಂಗೀತ ಅದ್ಭುತವಾಗಿದೆ. ನನ್ನ ಜೊತೆ ಅಭಿನಯಿಸಿರುವ ನಾಯಕಿಯರ ಅಭಿನಯವು ತುಂಬಾ ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಹರಸಿ’ ಎಂದರು.

ಕನ್ನಡಕ್ಕೆ ಮತ್ತೆ ಮರಳಿದ ನೀಲ
ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ‘ನೀಲ’ ಹಾಗೂ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರೊಂದಿಗೆ ‘ಸ್ವಾಮಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ, ಗಾಯತ್ರಿ ಜಯರಾಮ್ ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಹಲವು ವರ್ಷಗಳ ನಂತರ ನಾನು ಇಲ್ಲಿ ನಟಿಸಿದ್ದೇನೆ. ಈವರೆಗೂ ಮಾಡದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅವಕಾಶ ನೀಡಿದ ನಿರ್ದೇಶಕರಿಗೆ ವಂದನೆ’ ಎನ್ನುತ್ತಾರೆ ಗಾಯತ್ರಿ ಜಯರಾಮ್.

ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್ (ನಾಗವಾರ) ಹಾಗೂ ಸುರೇಖಾ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲೂಸ್ ಮಾದ ಯೋಗೇಶ್ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ಇತ್ತೀಚೆಗೆ ನಿಧನರಾದ ಸಂಚಾರಿ ವಿಜಯ್ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಪ್ರಶಾಂತ್ ಸಿದ್ದಿ, ಆದ್ಯ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
****