‘ಪುಕ್ಸಟ್ಟೆ ಲೈಫ್’ಗೆ ದುಬಾರಿ ಮೆಚ್ಚುಗೆ, ಮತ್ತೆ ಜನರ ಮನ ಗೆದ್ದ ಸಂಚಾರಿ ವಿಜಯ್..!

ಇಂದು (ಸೆಪ್ಟೆಂಬರ್ 25) ರಾಜ್ಯಾದಂತ ತೆರೆ ಕಂಡಿರುವ ‘ಪುಕ್ಸಟ್ಟೆ ಲೈಫು’ ಚಿತ್ರ ಸಿನಿ ಪ್ರೇಕ್ಷಕರ ಮನ ಗೆದ್ದಿದೆ. ಒಂದು ತಮಾಷೆಯ ಕಥೆಯನ್ನು ಸ್ನೇಹಿತನೊಬ್ಬ ಪಕ್ಕದಲ್ಲಿ ಕೂತು ಹೇಳುತ್ತಿದ್ದಾನೆ ಎನ್ನುವಂತೆ ಅನುಭವವಾಗುತ್ತಿರುವ ಹೊತ್ತಿಗೆ ಸಿನಿಮಾ ಇಂಟರ್ವೆಲ್ ಗೆ ಬಂದಿರುವುದು ಗೊತ್ತೆ ಆಗುವುದಿಲ್ಲಾ. ನೋಡಲು ಸುಲಲಿತವೆನ್ನಿಸಿದರೂ ಆಳವಾದ, ಸಂಕೀರ್ಣ ಅಭಿನಯ ಸಂಚಾರಿ ವಿಜಯ್ ಅವರದ್ದು.
ಡೂಪ್ಲಿಕೇಟ್ ಬೀಗ ಮಾಡುವ ಹುಡುಗನೊಬ್ಬನಿಗೆ ಪೋಲಿಸರ ಸಹವಾಸವಾಗಿ ಅವರ ಮೆಗಾ ಪ್ಲಾನಿನ ಭಾಗವಾಗಿ ಕಳ್ಳತನಕ್ಕೆ ಇಳಿದು ನಂತರ ತನ್ನದೇ ಬದುಕಿನ ಅನಿವಾರ್ಯತೆಗಳಿಗೆ ತೆರೆದುಕೊಂಡು ಕೆಲವು ತಪ್ಪು ಅನ್ನಿಸುವಂಥ ನಿರ್ಧಾರವನ್ನು ತೆಗೆದುಕೊಳ್ಳುವ ಕಥೆ ಇದು. ಎಲ್ಲೂ ನೈತಿಕತೆಯ ಅನವಶ್ಯಕ ಪಾಠವಿಲ್ಲ. ಎಲ್ಲರೂ ಮನುಷ್ಯರೇ, ತಪ್ಪು-ಒಪ್ಪುಗಳನ್ನು ಒಳಗೊಂಡವರೇ ಎನ್ನುವುದು ಧ್ಯೇಯ ವಾಕ್ಯ ಅನ್ನುವಂತಿದೆ ಸಿನಿಮಾದ ಕಥಾಹಂದರ.
ಮೊದಮೊದಲಿಗೆ ತುಟಿ ಬಿರಿಸುವಷ್ಟೇ ತಮಾಷೆ ಅನ್ನಿಸಿದರೂ ನಂತರ ಪಾತ್ರಗಳು ಮನಸ್ಸಿನಲ್ಲಿ ಇಳಿದು ನಗುವೇ ಅಭಿವ್ಯಕ್ತಿಯ ಭಾಗವಾಗುತ್ತದೆ. ಕಥೆ ಸ್ವತಂತ್ರವಾಗಿ ನಿಲ್ಲುವುದು ಪಾತ್ರಗಳ ಮೂಲಕ ಮಾತ್ರ. ಹಾಗಾಗಿ ಸಿನಿಮಾದಲ್ಲಿ ಡ್ರೋನ್ ಶಾಟ್ ಗಳು ಹೆಚ್ಚು ಬಳಕೆಯಾಗಿದ್ದು ಬಿಟ್ಟರೆ ಹೆಚ್ಚು ಟೈಟ್ ಫ್ರೇಮುಗಳ ಬಳಕೆ ಇದೆ. ರಂಗಭೂಮಿಯ ಹಿನ್ನೆಲೆ ಇರುವ ಬಹಳ ಜನ ಇದರಲ್ಲಿ ಪಾತ್ರ ಮಾಡಿರುವುದರಿಂದ ಚಿತ್ರ ಎಲ್ಲೂ ಅರೆಬರೆ ಅನ್ನಿಸುವುದಿಲ್ಲ. ಇದಕ್ಕೆ ಅನುಭವಿ ನಟರ ಅಭಿನಯ ಇರುವುದೂ ಕೂಡ ಒಂದು ಮುಖ್ಯ ಕಾರಣ ಇರಬಹುದು. ಎಲ್ಲಿಯೂ ಸಿನಿಮಾ ಕನಸು ಅನ್ನಿಸದೆ ನಮ್ಮ ಪಕ್ಕವೇ ನಡೆದುಹೋಗುತ್ತದೆ.
ಸಂಚಾರಿ ವಿಜಯ್ ನಮ್ಮ ನಡುವೆ ಇಲ್ಲ ಅನ್ನುವುದು ಸಿನಿಮಾದ ಉದ್ದಕ್ಕೂ ಒಂದು ಬಗೆಯಲ್ಲಿ ಅಂಗಾಲಿಗೆ ಒತ್ತಿದ ಮುಳ್ಳಿನ ಹಾಗೆ ಹೆಜ್ಜೆ ಇಟ್ಟಾಗಲೆಲ್ಲಾ ನೆನಪಾಗುವ ಒಂದು ತೀವ್ರ ನೋವು. ಎಂಥಾ ನಟ, ಎಂಥಾ ಭವಿಷ್ಯದ ಕನಸು ಕಾಣುತ್ತಿದ್ದ ಪ್ರತಿಭಾವಂತ…ಹೀಗೆ ಹೋಗಿಬಿಟ್ಟರಲ್ಲಾ ಎನ್ನುವುದು ಚಿತ್ರರಂಗಕ್ಕೆ ನಿಜಕ್ಕೂ ತುಂಬಲಾಗದ ನಷ್ಟವೇ.
ಪುಕ್ಸಟ್ಟೆ ಲೈಫು ನಾಯಕತ್ವದ ಭರಾಟೆಯಲ್ಲಿ ಏಕಮುಖವಾಗಿ ಕಳೆದುಹೋಗಿರುವ ಕನ್ನಡ ಚಿತ್ರರಂಗಕ್ಕೆ ಹೊಸ ಬಗೆಯ ವ್ಯಾಖ್ಯಾನ ತರುವ ಸಿನಿಮಾ. ನಿರ್ದೇಶಕ ಅರವಿಂದ ಕುಪ್ಲೀಕರ್, ಸಿನಿಮಾ ಛಾಯಾಗ್ರಾಹಕ ಅದ್ವೈತ ಗುರುಮೂರ್ತಿ, ಚಟುವಟಿಕೆಯ ಸಂಕಲನ ಮಾಡಿರುವ ಸುರೇಶ್ ಆರ್ಮುಗಂ, ವಾಸು ದೀಕ್ಷಿತ್ ಅವರ ಸಂಗೀತ ಇವೆಲ್ಲವೂ ಸಿನಿಮಾವನ್ನು ಒಂದು ಚಂದದ ಅನುಭವವನ್ನಾಗಿಸಿವೆ.

ಸಿನಿಮಾಕ್ಕೆ ಬಹಳ ಉತ್ತಮ ಸಬ್ ಟೈಟಲಿಂಗ್ ಆಗಿದೆ. ಇದು ಒಂದು ಸಿನಿಮಾ ಕರ್ನಾಟಕದ ಗಡಿ ದಾಟಿ ಹೋಗಲು ಎಷ್ಟು ಮುಖ್ಯ ಎನ್ನುವುದನ್ನು ನಿರ್ದೇಶಕರು ನಿರ್ಮಾಪಕರು ಅರಿತುಕೊಂಡರೆ ಉತ್ತಮ ಕನ್ನಡ ಸಿನಿಮಾಗಳು ರಾಜ್ಯದಿಂದ ಹೊರಗೆ ಹೋಗಿ ವಿಜೃಂಭಿಸಬಲ್ಲವು. ಮತ್ತೆ ಮತ್ತೆ ಕಾಡುವ ಚಿತ್ರ ಪುಕ್ಸಟ್ಟೆ ಲೈಫು.
****