‘ದೃಶ್ಯ 2’ ಚಿತ್ರದ ಟ್ರೇಲರ್ ಬಿಡುಗಡೆ, ಸಿನಿಮಾಕ್ಕೆ ಸುದೀಪ್ ಬೆಂಬಲ

ರವಿಚಂದ್ರನ್ ನಟಿಸಿರುವ ‘ದೃಶ್ಯ 2’ ಸಿನಿಮಾದ ಟ್ರೇಲರ್ ಅನ್ನು ಇಂದು ನಟ ಸುದೀಪ್ ಬಿಡುಗಡೆಗೊಳಿಸಿದ್ದಾರೆ. 2014 ರ ‘ದೃಶ್ಯ’ ಸಿನಿಮಾ ನಿರ್ದೇಶಿಸಿದ್ದ ಪಿ.ವಾಸು ಅವರೇ ‘ದೃಶ್ಯ 2’ ಅನ್ನು ನಿರ್ದೇಶನ ಮಾಡಿದ್ದಾರೆ. 2014 ರ ಸಿನಿಮಾ ಮೋಹನ್ ಲಾಲ್ ರ ‘ದೃಶ್ಯಂ’ ಸಿನಿಮಾದ ರೀಮೇಕ್ ಆಗಿತ್ತು. ಈಗಲೂ ಸಹ ಮಲಯಾಳಂ ಸಿನಿಮಾ ‘ದೃಶ್ಯಂ 2’ ನ ರೀಮೇಕ್ ಕನ್ನಡದ ‘ದೃಶ್ಯ 2’.ಈ ಸಿನಿಮಾ ಹೇಗಿರಲಿದೆ ಎನ್ನುವ ಝಲಕ್ ನಿನ್ನೆ (ನವೆಂಬರ್ 26) ರಿಲೀಸ್ ಆದ ಟ್ರೇಲರ್ನಲ್ಲಿ ಸಿಕ್ಕಿದೆ. ಈ ಸಿನಿಮಾದ ಟ್ರೇಲರ್ಅನ್ನು ಕಿಚ್ಚ ಸುದೀಪ್ ಅನಾವರಣ ಮಾಡಿದ್ದು ವಿಶೇಷವಾಗಿತ್ತು.
‘ದೃಶ್ಯ’ ಸಿನಿಮಾದಲ್ಲಿ ಐಜಿ ಹುದ್ದೆಯಲ್ಲಿರುವ ರೂಪಾ ಚಂದ್ರಶೇಖರ್ ಮಗ ತರುಣ್ ಚಂದ್ರಶೇಖರ್ ಅವರನ್ನು ರಾಜೇಂದ್ರ ಪೊನ್ನಪ್ಪ ಅವರು ಪೊಲೀಸ್ ಠಾಣೆಯಲ್ಲಿ ಹುಗಿದು ಹಾಕಿದ್ದರು. ಆ ನಂತರ ಇಡೀ ಕುಟುಂಬ ಹಾಯಾಗಿ ಜೀವನ ನಡೆಸುತ್ತಿರುತ್ತದೆ. ಆದರೆ, ಈಗ ಈ ವಿಚಾರ ರಿವೀಲ್ ಆಗಿದೆ. ಇದರಿಂದ ರಾಜೇಂದ್ರ ಪೊನ್ನಪ್ಪ ಹೇಗೆ ತಪ್ಪಿಸಿಕೊಳ್ಳುತ್ತಾರೆ ಅನ್ನೋದು ಸಿನಿಮಾದ ಹೈಲೈಟ್ ಆಗಲಿದೆ ಎಂಬುದಕ್ಕೆ ‘ದೃಶ್ಯ 2’ ಟ್ರೇಲರ್ ಸಾಕ್ಷ್ಯ ನೀಡಿದೆ. ಈ ಸಿನಿಮಾ ಡಿಸೆಂಬರ್ 10ಕ್ಕೆ ರಿಲೀಸ್ ಆಗುತ್ತಿದೆ.
‘ನಾನು ‘ದೃಶ್ಯ’ ಸಿನಿಮಾವನ್ನು ಕನ್ನಡದಲ್ಲಿ ನೋಡಿದ್ದೆ. ಇದರ ಸೀಕ್ವೆಲ್ ಕೂಡ ಕನ್ನಡದಲ್ಲೇ ನೋಡುತ್ತೇನೆ. ಇಲ್ಲಿ ಸಿನಿಮಾ ನೋಡಿದಾಗ ಹೆಚ್ಚು ಕನೆಕ್ಟ್ ಆಗುತ್ತೇವೆ. ‘ದೃಶ್ಯ 3’ ಕನ್ನಡದಲ್ಲಿ ಮೊದಲು ಮಾಡಿ’ ಎಂದು ಮನವಿ ಮಾಡಿದರು ಸುದೀಪ್.
ಇ4 ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ‘ದೃಶ್ಯ 2’ ಸಿನಿಮಾ ಮೂಡಿಬಂದಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಸಿ.ವಿ. ಸಾರಥಿ ಕೆಲಸ ಮಾಡಿದ್ದಾರೆ. ಜಿ.ಎಸ್.ವಿ. ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ರವಿ ಸಂತೆಹುಕ್ಲು ಕಲಾ ನಿರ್ದೇಶನ ಹಾಗೂ ಲೋಕೇಶ್ ಬಿಕೆ ಗೌಡ, ಭರತ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ, ಕೃಷ್ಣ ಯಟರ್ನ್, ನಾರಾಯಣ್ ಸ್ವಾಮಿ, ಲಾಸ್ಯ ನಾಗರಾಜ್ ಮುಂತಾದವರು ನಟಿಸಿದ್ದಾರೆ.