News

ಚೇತರಿಕೆ ಕಾಣದ ಶಿವರಾಮ್ ಆರೋಗ್ಯ ಸ್ಥಿತಿ!

ಚೇತರಿಕೆ ಕಾಣದ ಶಿವರಾಮ್ ಆರೋಗ್ಯ ಸ್ಥಿತಿ!
  • PublishedDecember 4, 2021

ಕನ್ನಡ ಚಿತ್ರರಂದ ಹಿರಿಯ ಕಲಾವಿದ ಶಿವರಾಮ್ ಅವರಿಗೆ ಕಳೆದ ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸರ್ಜರಿ ನಡೆಸುವಷ್ಟು ಅವರು ಚೇತರಿಕೆ ಕಂಡಿಲ್ಲ. ಅವರಿಗೆ ಈಗ 84 ವರ್ಷ ವಯಸ್ಸು. ಸದ್ಯ ಅವರ ಮಿದುಳು ನಿಷ್ಕ್ರಿಯಗೊಂಡು ಕೋಮಾ ಸ್ಥಿತಿ ತಲುಪಿದ್ದಾರೆ. ಶಿವರಾಂ ವಿಚಾರದಲ್ಲಿ ಯಾವುದೇ ಮಿರಾಕಲ್ ನಡೆಯೋ ಸಾಧ್ಯತೆ ಇಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಶನಿವಾರ (ಡಿ.4) ಅವರ ಆರೋಗ್ಯ ಇನ್ನಷ್ಟು ಕ್ಷೀಣಿಸಿದೆ. ಕ್ಷಣಕ್ಷಣಕ್ಕೂ ಪರಿಸ್ಥಿತಿ ಹದಗೆಡುತ್ತಿದೆ. ಶೀಘ್ರದಲ್ಲೇ ವೈದ್ಯರು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಬೆಂಗಳೂರಿನ ಸೀತಾ ಸರ್ಕಲ್​ ಬಳಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಚಂದನವನದ ಅನೇಕ ಹಿರಿಯ ನಟ-ನಟಿಯರು ಬಂದು ಶಿವರಾಂ ಅವರನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಶಿವರಾಂ ಕೋಮಾ ಹಂತ ತಲುಪಿರುವುದರಿಂದ ಅವರ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಕನ್ನಡ ಚಿತ್ರರಂಗಕ್ಕೆ ಶಿವರಾಂ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಬಣ್ಣದ ಲೋಕದಲ್ಲಿ ಅವರ ಅನುಭವ 6 ದಶಕಗಳಿಗೂ ಹೆಚ್ಚು.

ಶಿವರಾಂ ಅವರನ್ನು ನೋಡಲು ಶುಕ್ರವಾರ (ಡಿ.3) ಆಸ್ಪತ್ರೆಗೆ ಶಿವರಾಜ್​ಕುಮಾರ್​ ಭೇಟಿ ನೀಡಿದ್ದರು. ಡಾ. ರಾಜ್​ಕುಮಾರ್ ಕುಟುಂಬ​ದ ಜತೆ ಶಿವರಾಂ ಅವರಿಗೆ ಆಪ್ತ ಒಡನಾಟ ಇದೆ. ಆ ಬಗ್ಗೆ ಶಿವಣ್ಣ ಮಾತನಾಡಿದ್ದರು. ‘ಅವರ ಫ್ಯಾಮಿಲಿಗೆ ಧೈರ್ಯ ಹೇಳುತ್ತೇನೆ. ನಾನು ಕೂಡ ಅವರ ಕುಟುಂಬದ ಸದಸ್ಯ ಆಗಿರುವುದರಿಂದ ನಮಗೂ ಎಲ್ಲರೂ ಧೈರ್ಯ ಹೇಳಬೇಕು. ಒಂದು ತಿಂಗಳ ಹಿಂದಷ್ಟೇ ತಮ್ಮನನ್ನು ಕಳೆದುಕೊಂಡಿದ್ದೇನೆ. ದೇವರು ಪದೇಪದೇ ಯಾಕೆ ಈ ರೀತಿ ನೋವು ಕೊಡುತ್ತಾನೆ ಅಂತ ನಮಗೂ ಅರ್ಥ ಆಗುವುದಿಲ್ಲ’ ಎಂದಿದ್ದರು ಶಿವಣ್ಣ.

‘ಒಂದು ವರ್ಷದಲ್ಲಿ ಮೂರು-ನಾಲ್ಕು ಬಾರಿ ಶಿವರಾಂ ಅವರು ಶಬರಿಮಲೆ ಅಪ್ಪಯ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಾರೆ. ನಮ್ಮ ಜೊತೆಯೂ ಹೋಗಿ ಬರುತ್ತಿದ್ದರು. ಸ್ನೇಹಿತರು ಯಾರಾದರೂ ಅಯ್ಯಪ್ಪ ಸ್ವಾಮಿ ಪೂಜೆ ಮಾಡಿದಾಗಲೂ ಹೋಗುತ್ತಾರೆ. ಅಯ್ಯಪ್ಪ ಸ್ವಾಮಿ ಎಂದರೆ ಶಿವರಾಂ ಅವರಿಗೆ ಏನೋ ವಿಶೇಷ ಪ್ರೀತಿ. ಮೂರು ವರ್ಷದ ಹಿಂದೆ ಶಬರಿಮಲೆಗೆ ಹೋಗಿದ್ವಿ. ಕೋವಿಡ್​ ಬಂದ ನಂತರ ಹೋಗಲು ಸಾಧ್ಯವಾಗಿರಲಿಲ್ಲ. ಆಗ ಅವರಿಗೆ 81 ವರ್ಷ. ಆ ವಯಸ್ಸಿನಲ್ಲೂ ಅವರು ಬೆಟ್ಟ ಹತ್ತುತ್ತಿದ್ದರು. ಅವರಲ್ಲಿ ಇರುವ ಆ ಮನೋಬಲವೇ ಅವರನ್ನು ಕಾಪಾಡುತ್ತದೆ ಎಂದುಕೊಂಡಿದ್ದೇನೆ. ಆ ದೇವರು ಅವರನ್ನು ಕಾಪಾಡಬೇಕು ಎಂಬುದೇ ನಮ್ಮ ಆಸೆ. ಕರ್ನಾಟಕದ ಜನತೆಯ ಪ್ರೀತಿ-ಅಭಿಮಾನದಿಂದ ಅವರು ಗುಣಮುಖರಾಗುತ್ತಾರೆ’ ಎಂದು ಶಿವಣ್ಣ ಹೇಳಿದ್ದರು.

****

Written By
Kannadapichhar

Leave a Reply

Your email address will not be published. Required fields are marked *