ಚಿತ್ರರಂಗದ ಸೇವೆಗಾಗಿ ‘ಸುಧಾರಾಣಿ’ಗೆ ಲಭಿಸಿದೆ ಗೌರವ ಡಾಕ್ಟರೇಟ್..!
ನಟಿ ಸುಧಾರಾಣಿ ಚಿತ್ರರಂಗಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಇಂಡಿಯನ್ ಎಂಪೈರ್ ವಿಶ್ವವಿದ್ಯಾಲಯವು ಯೂನಿವರ್ಸಲ್ ಡೆವೆಲೆಪ್‌ಮೆಂಟ್ ಕೌನ್ಸಿಲ್‌ನಿಂದ ಗೌರವ ಡಾಕ್ಟರೇಟ್ ವಿತರಿಸಲಾಗಿದೆ. ಈ ಸಂತಸದ ವಿಷಯವನ್ನು ಸುಧಾರಾಣಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಟಿ ಸುಧಾರಾಣಿ ಸತತ 35 ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಶಿವರಾಜ್ ಕುಮಾರ್ ಜೊತೆಗೆ ‘ಆನಂದ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದಾಗ ಸುಧಾರಾಣಿ ವಯಸ್ಸು ಕೇವಲ 12 ವರ್ಷ. ‘ಆನಂದ್’ ಸಿನಿಮಾ ಶಿವರಾಜ್ ಕುಮಾರ್ ಅವರಿಗೂ ಮೊದಲ ಸಿನಿಮಾ. ‘ಆನಂದ್’ ಸಿನಿಮಾದಲ್ಲಿ ನಟಿಸುವುದಕ್ಕೂ ಮೊದಲು ಸುಧಾರಾಣಿ ಕೆಲವು ಸಿನಿಮಾಗಳಲ್ಲಿ ಬಾಲನಟಿಯಾಗಿಯೂ ನಟಿಸಿದ್ದರು. ಅಂದಿನಿಂದ ಈವರೆಗು ಹಲವಾರು ಸಿನಿಮಾಗಳಲ್ಲಿ ಸುಧಾರಾಣಿ ನಟಿಸಿದ್ದಾರೆ. ಕನ್ನಡ ಮಾತ್ರವೇ ಅಲ್ಲದೆ ಪರಭಾಷೆ ಸಿನಿಮಾಗಳಲ್ಲಿಯೂ ಸುಧಾರಾಣಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ತಮಗೆ ಗೌರವ ಡಾಕ್ಟರೇಟ್ ಲಭಿಸಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸುಧಾರಾಣಿ, ”ಇಂಡಿಯನ್ ಎಂಪೈರ್ ವಿಶ್ವವಿದ್ಯಾಲಯವು ಯೂನಿವರ್ಸಲ್ ಡೆವೆಲೆಪ್‌ಮೆಂಟ್ ಕೌನ್ಸಿಲ್ ಸಹಯೋಗದೊಂದಿಗೆ, ನಾನು ಕಲಾಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ನೀಡಿದೆ. ಇದು ನನಗೆ ಬಹಳ ಗೌರವದ ವಿಷಯ. ಇದನ್ನು ನನ್ನ ಕುಟುಂಬ (ಅಭಿಮಾನಿಗಳು)ದೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
****