ಒರಿಸ್ಸಾದ ಮೆರೀನ್ ಡ್ರೈವ್ ಬೀಚ್ ನಲ್ಲಿ ಅರಳಿದ ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!

ಕನ್ನಡ ಚಿತ್ರರಂಗದ ಜನ ಮಾನಸದಲ್ಲಿ ಎಂದೂ ಅಳಿಸಲಾಗದ ಹೆಸರು ಎಂದರೆ ಸಾಹಸ ಸಿಂಹ ಡಾ.ವಿಷ್ಣುವರ್ಧನ್. ಅವರ ಅಭಿಮಾನಿಗಳಿಗೆ ಪ್ರೀತಿಯ ವಿಷ್ಣು ದಾದಾ. ಸಂಪತ್ ಕುಮಾರ್ ಆಗಿ ಬಂದು ಸಾಹಸ ಸಿಂಹನಾಗಿ ಬೆಳೆದ ದಾರಿ ರೋಚಕ,ಸಿನಿಮಾ ರಂಗದಲ್ಲಿ ಡಾ ವಿಷ್ಣುವರ್ಧನ್ ಅವರು ಮಾಡಿರುವ ಪಾತ್ರಗಳು ಅನನ್ಯ ಮತ್ತು ಅಭಿನಯದ ಮೂಲಕ ವಿಷ್ಣುವರ್ಧನ್ ಅಜರಾಮರ. ಕನ್ನಡಿಗರ ಮನಸ್ಸಿನಿಂದ ಎಂದೂ ಮರೆಯಾಗದ ಮಾಣಿಕ್ಯ.
ಸಾಹಸ ಸಿಂಹ, ಅಭಿನಯ ಭಾರ್ಗವ ಹೀಗೆ ಅನೇಕ ಬಿರುದುಗಳು ವಿಷ್ಣುವರ್ಧನ್ ಅವರಿಗೆ ಅವರ ಅಭಿಮಾನಿಗಳು ಮತ್ತು ಚಿತ್ರರಂಗ ನೀಡಿ ಗೌರವಿಸಿವೆ. ಇದೇ ಸೆಪ್ಟಂಬರ್ 18 ರಂದು ಡಾ.ವಿಷ್ಣುವರ್ಧನ್ ಅವರ ಜನ್ಮದಿನ. ಅವರು ತೀರಿಕೊಂಡು ಇಲ್ಲಿಗೆ 12 ವರ್ಷ ಕಳೆದಿದ್ದರೂ ಅವರ ಹುಟ್ಟುಹಬ್ಬದ ದಿನದಂದು ಅವರ ಅಭಿಮಾನಿಗಳು ಮತ್ತು ವಿಷ್ಣು ಸೇನಾ ಸಮಿತಿ ಸದಸ್ಯರು ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ.
ವಿಷ್ಣುವರ್ಧನ್ ಅವರು ಕನ್ನಡದ ಜೊತೆಗೆ ಇತರೆ ಭಾಷೆಗಳ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ ಹಾಗಾಗಿ ಅವರಿಗೆ ದೇಶದ ಬೇರೆ ಬೇರೆ ರಾಜ್ಯದಲ್ಲೂ ಅಭಿಮಾನಿಗಳು ಇದ್ದಾರೆ. ಹಿಂದಿ, ತಮಿಳು, ತೆಲಗು, ಮಲೆಯಾಳಂ ಭಾಷೆಯ ಚಿತ್ರಗಳಲ್ಲೂ ಅಭಿನಯಿಸಿ ಸೈ ಎನ್ನಿಸಿಕೋಂಡಿದ್ದರು.
ಒರಿಸ್ಸಾದ ಸಮುದ್ರ ತೀರದಲ್ಲಿ ಅರಳಿದ ಡಾ.ವಿಷ್ಣುವರ್ಧನ್ ಅವರ ಮರಳು ಶಿಲ್ಪ!
ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದರೊಬ್ಬರ ಮರಳು ಶಿಲ್ಪ ಅರಳಿದೆ. ಆ ಶಿಲ್ಪ ಕನ್ನಡದ ಮೇರುನಟರಾದ ಡಾ.ವಿಷ್ಣುವರ್ಧನ್ ಅವರದ್ದು. ಇದೇ ಸೆಪ್ಟೆಂಬರ್ 18ರಂದು ಡಾ.ವಿಷ್ಣು ಅವರ 71ನೇ ಜನ್ಮದಿನ. ಆ ಪ್ರಯುಕ್ತ ಮರಳುಶಿಲ್ಪ ಕಲೆಯ ತವರೂರಾದ ಒರಿಸ್ಸಾದಲ್ಲಿ ಡಾ.ವಿಷ್ಣುವರ್ಧನ್ ಅವರ 6 ಅಡಿ ಎತ್ತರ ಮತ್ತು 15 ಅಡಿ ಅಗಲದ ಮರಳು ಶಿಲ್ಪ ಅರಳಿದೆ. ಶಿಲ್ಪದ ಬಲ ಭಾಗದಲ್ಲಿ ಜೈ ಕನ್ನಡ ಎಂದು ಬರೆದು ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನವನ್ನು ನ್ಯಾಷನಲ್ ಐಡಿಯಲ್ ಡೇ ಎಂದು ಪರಿಗಣಿಸಲ್ಪಡುವಂತಹ ಸಾಲುಗಳ ಜೊತೆಗೆ ದಿ ಪ್ರೈಡ್ ಆಫ್ ಇಂಡಿಯನ್ ಸಿನಿಮಾ ಎಂದು ಬರೆಯುವ ಮೂಲಕ ವಿಷ್ಟುವರ್ಧನ್ ಅವರಿಗೆ ಗೌರವ ಸೂಚಿಸಿದ್ದಾರೆ.

ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಅವರು ಈ ಶಿಲ್ಪವನ್ನು ರಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ವೀರಕಪುತ್ರ ಶ್ರೀನಿವಾಸ ಅವರು ಒದಗಿಸಿದ್ದಾರೆ.
****