ಇಂದು ತೆರೆ ಕಂಡಿದೆ ‘ಗಣಿ’ಯ ಸಖತ್ ಮತ್ತು ಹೊಸಬರ ‘ಗೋರಿ’ ಸಿನಿಮಾ!
ಸ್ಯಾಂಡಲ್ ವುಡ್ ಅಂಗಳದಲ್ಲಿ ಇಂದು ಹಬ್ಬದ ಛಾಯೆ, ಶುಕ್ರವಾರ ಬಂತೆಂದರೆ ಒಂದಲ್ಲಾ ಒಂದು ಸಿನಿಮಾಗಳು ಗಾಂಧಿನಗರದಲ್ಲಿ ತೆರೆಗೆ ಬರುತ್ತವೆ. ಇದೇ ಮೊದಲ ಬಾರಿಗೆ ನಟ ಗಣೇಶ್ ಅವರು ‘ಸಖತ್’ ಸಿನಿಮಾದಲ್ಲಿ ಅಂಧನ ಪಾತ್ರ ಮಾಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನ ಮಾಡಿರುವ ಈ ಚಿತ್ರ ಇಂದು (ನ.26) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಗಣೇಶ್ಗೆ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಸುರಭಿ ಪುರಾಣಿಕ್ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕಾಮಿಡಿ ನಟರಾದ ಸಾಧುಕೋಕಿಲ, ಧರ್ಮಣ್ಣ, ಕುರಿ ಪ್ರತಾಪ್ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇತ್ತೀಚೆಗೆ ಚಂದನವನದಲ್ಲಿ ಹೊಸಬರ ತಂಡ ತಮ್ಮ ಅದೃಷ್ಟ ಪರೀಕ್ಷಗೆ ಹೆಚ್ಚಾಗಿಯೆ ಇಳಿದಂತಿದೆ, ಇಂದು (ನವೆಂಬರ್ 26) ತೆರೆ ಕಂಡಿರುವ ‘ಗೋರಿ’ ಸಿನಿಮಾ ಕೂಡ ಹೊಸ ಪ್ರತಿಭೆಗಳು ಸೇರಿ ತಯಾರಿಸಿರುವ ಚಿತ್ರ.‘ಸಖತ್’ ಸಿನಿಮಾ ಜೊತೆಯಲ್ಲೇ ತೆರೆಕಂಡಿರುವ ‘ಗೋರಿ’ ಚಿತ್ರಕ್ಕೆ ಉತ್ತರ ಕರ್ನಾಟಕ ಮೂಲದ ಕಿರಣ್ ಹಾವೇರಿ ಹೀರೋ. ಹಲವು ವರ್ಷಗಳ ಕಾಲ ಸಿನಿಮಾ ಪತ್ರಕರ್ತನಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ಹೀರೋ ಆಗಿದ್ದಾರೆ. ಅವರಿಗೆ ಜೋಡಿಯಾಗಿ ಸ್ಮಿತಾ ಹಾವೇರಿ ನಟಿಸಿದ್ದಾರೆ. ಸ್ನೇಹಿತರೆಲ್ಲ ಜೊತೆಗೂಡಿ ‘ಗೋರಿ’ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ವೀರೇಶ್, ಶಾರದಾ ಚಿತ್ರಮಂದಿರಗಳು ಮಾತ್ರವಲ್ಲದೇ, ಉತ್ತರ ಕರ್ನಾಟಕದ ಹಲವೆಡೆ ಈ ಸಿನಿಮಾ ರಿಲೀಸ್ ಆಗಿದೆ. ಹಾಡುಗಳ ಮೂಲಕ ಈಗಾಗಲೇ ‘ಗೋರಿ’ ಚಿತ್ರ ಗಮನ ಸೆಳೆದಿದೆ.
‘ಗೋರಿ’ ಸಿನಿಮಾದ ನಾಯಕ ಕಿರಣ್ ಅವರಿಗೆ ‘ಗೋಲ್ಡನ್ ಸ್ಟಾರ್’ ಗಣೇಶ್ ಅವರೇ ಸ್ಫೂರ್ತಿ. ಈಗ ತಮ್ಮ ನೆಚ್ಚಿನ ಹೀರೋ ಸಿನಿಮಾದ ಜೊತೆಯಲ್ಲೇ ತಮ್ಮ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದು ಅವರಿಗೆ ಇನ್ನಷ್ಟು ಖುಷಿ ನೀಡಿರುವ ಸಂಗತಿ. ಚಿತ್ರರಂಗದ ಹಲವರು ಕಿರಣ್ ಹಾವೇರಿ ಮತ್ತು ತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿ, ಶುಭಾಶಯ ಕೋರಿದ್ದಾರೆ.
****